ಕ್ರಾಂತಿಕಾರಿ ಪಡೆಯ ಕಪಿಮುಷ್ಟಿಯಲ್ಲಿ ಇರಾನ್: ಖಮೇನಿ ಪುತ್ರ ಮೊಜ್ತಾಬಾಗೆ ಪಟ್ಟಾಭಿಷೇಕ!

ನವದೆಹಲಿ: ಇರಾನ್‌ನ ದಶಕಗಳ ಅಧಿಪತಿ, ಪರಮೋಚ್ಛ ನಾಯಕ ಅಲಿ ಖಮೇನಿ ಅಮೆರಿಕ ಮತ್ತು ಇಸ್ರೇಲ್‌ನ ಭೀಕರ ವಾಯುದಾಳಿಗೆ ಬಲಿಯಾಗಿದ್ದಾರೆ. ಈ ಆಕಸ್ಮಿಕ ಶೂನ್ಯವನ್ನು ತುಂಬಲು ಇರಾನ್‌ನ ಪ್ರಭಾವಿ ಧಾರ್ಮಿಕ ಪಂಡಿತರ ಮಂಡಳಿ ʻಅಸೆಂಬ್ಲಿ ಆಫ್ ಎಕ್ಸ್‌ಪರ್ಟ್ಸ್’, ಖಮೇನಿ ಅವರ 56 ವರ್ಷದ ಪುತ್ರ ಮೊಜ್ತಾಬಾ ಖಮೇನಿ ಅವರನ್ನು ದೇಶದ ನೂತನ ಪರಮೋಚ್ಛ ನಾಯಕನನ್ನಾಗಿ ಅಧಿಕೃತವಾಗಿ ಆಯ್ಕೆ ಮಾಡಿದೆ.

1979ರ ಕ್ರಾಂತಿಯ ನಂತರ ರಾಜಪ್ರಭುತ್ವವನ್ನು ಕಿತ್ತೊಗೆದಿದ್ದ ಇರಾನ್‌ನಲ್ಲಿ, ಈಗ ತಂದೆಯ ನಂತರ ಮಗನೇ ಅಧಿಕಾರ ಹಿಡಿಯುತ್ತಿರುವುದು ಒಂದು ಐತಿಹಾಸಿಕ ವಿಪರ್ಯಾಸವಾಗಿ ಕಂಡರೂ, ಇದರ ಹಿಂದೆ ಇರಾನ್‌ನ ಶಕ್ತಿಶಾಲಿ ಸೇನಾ ಪಡೆ IRGC (ರೆವಲ್ಯೂಷನರಿ ಗಾರ್ಡ್) ನ ಬಲವಾದ ಕೈವಾಡವಿದೆ ಎನ್ನಲಾಗುತ್ತಿದೆ.

ಮೊಜ್ತಾಬಾ ಕೇವಲ ವಂಶಪಾರಂಪರ್ಯ ಉತ್ತರಾಧಿಕಾರಿಯಲ್ಲ; ಅವರು ದಶಕಗಳಿಂದ ಇರಾನ್‌ನ ಸೈನ್ಯ, ಗುಪ್ತಚರ ಇಲಾಖೆ ಮತ್ತು ಆರ್ಥಿಕ ಸಾಮ್ರಾಜ್ಯದ ಮೇಲೆ ತೆರೆಮರೆಯಲ್ಲೇ ಹಿಡಿತ ಸಾಧಿಸಿದ ಚಾಣಾಕ್ಷ ರಾಜತಾಂತ್ರಿಕ. ಅಮೆರಿಕದ ದಾಳಿಯಲ್ಲಿ ತಂದೆ ಮತ್ತು ಕುಟುಂಬದ ಸದಸ್ಯರನ್ನು ಕಳೆದುಕೊಂಡಿರುವ ಮೊಜ್ತಾಬಾ, ಈಗ ಸೇಡಿನ ಕೆಂಡದಂತಿದ್ದಾರೆ. ಈ ಬೆಳವಣಿಗೆಯು ಕೇವಲ ಇರಾನ್ ಮಾತ್ರವಲ್ಲದೆ, ಇಸ್ರೇಲ್ ಜೊತೆಗಿನ ಸಂಘರ್ಷವನ್ನು ಮತ್ತಷ್ಟು ತೀವ್ರಗೊಳಿಸುವ ಮುನ್ಸೂಚನೆ ನೀಡಿದೆ.

ಇತ್ತ ಭಾರತದ ಕೈಗಾರಿಕೆಗಳಿಗೆ ಅನಿಲ ಪೂರೈಕೆ ಕಡಿತದಂತಹ ಆರ್ಥಿಕ ಸಂಕಷ್ಟಗಳು ಎದುರಾಗುತ್ತಿದ್ದರೆ, ಅತ್ತ ಮೊಜ್ತಾಬಾ ನೇತೃತ್ವದ ಇರಾನ್ ಯಾವ ರೀತಿಯ ಪ್ರತಿಕಾರ ತೀರಿಸಿಕೊಳ್ಳಲಿದೆ ಎಂಬುದು ಈಗ ಇಡೀ ಜಗತ್ತಿನ ಕುತೂಹಲವಾಗಿದೆ.

error: Content is protected !!