ಹೊಸದಿಲ್ಲಿ: ಮಧ್ಯ ಪ್ರಾಚ್ಯದಲ್ಲಿನ ಸದ್ಯದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ದುಬೈನಲ್ಲಿ ಕೆಲವು ದಿನಗಳ ಕಾಲ ಆತಂಕದ ಕ್ಷಣಗಳನ್ನು ಎದುರಿಸಿದ್ದ ಭಾರತೀಯ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಸುರಕ್ಷಿತವಾಗಿ ಭಾರತಕ್ಕೆ ವಾಪಸಾಗಿದ್ದಾರೆ.

ಇದೀಗ ಸಾಮಾಜಿಕ ಮಾಧ್ಯಮದ ಪೋಸ್ಟ್‌ನ ಮೂಲಕ ಸಿಂಧು ತನ್ನ ಮರಳಿಕೆಯನ್ನು ಖಚಿತಪಡಿಸಿದ್ದು, ವಿದೇಶದಲ್ಲಿ ಆತಂಕದ ಕ್ಷಣವನ್ನು ಎದುರಿಸಿದ ನಂತರ ಬೆಂಗಳೂರಿಗೆ ವಾಪಸಾಗಿದ್ದೇನೆ ಎಂದು ಸಿಂಧು ತಿಳಿಸಿದ್ದಾರೆ.

‘‘ಬೆಂಗಳೂರಿಗೆ ಸುರಕ್ಷಿತವಾಗಿ ವಾಪಸಾಗಿದ್ದೇನೆ. ಕಳೆದ ಕೆಲವು ದಿನಗಳು ಆತಂಕ ಹಾಗೂ ಅನಿಶ್ಚಿತತೆಯಿಂದ ಕೂಡಿತ್ತು. ಸುರಕ್ಷಿತವಾಗಿ ವಾಪಸಾಗಿದ್ದಕ್ಕೆ ಖುಷಿಯಾಗುತ್ತಿದೆ. ದುಬೈನ ಅಧಿಕಾರಿಗಳು,ವಿಮಾನ ನಿಲ್ದಾಣದ ಸಿಬ್ಬಂದಿ, ವಲಸೆ ವಿಭಾಗ ಹಾಗೂ ಅತ್ಯಂತ ಕಷ್ಟದ ಸಮಯದಲ್ಲಿ ನಮ್ಮನ್ನು ಚೆನ್ನಾಗಿ ನೋಡಿಕೊಂಡಿರುವ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಧನ್ಯವಾದಗಳು’’ ಎಂದು ಎಕ್ಸ್‌ನಲ್ಲಿ ಸಿಂಧು ಬರೆದಿದ್ದಾರೆ.