ಬೆಂಗಳೂರು: ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತು ಶಾಸಕ ಶ್ರೀವತ್ಸ ಅವರಿಗೆ ಜೀವ ಬೆದರಿಕೆ ಹಾಕಿದ ವ್ಯಕ್ತಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ನಗರ ಪೊಲೀಸ್ ಆಯುಕ್ತರಿಗೆ ಬಿಜೆಪಿ ಮುಖಂಡರು ದೂರು ನೀಡಿದ್ದಾರೆ.
ಇತ್ತೀಚೆಗೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತು ಶಾಸಕ ಶ್ರೀವತ್ಸ ಕುರುಬ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಅದನ್ನು ವಿರೋಧಿಸಿದ್ದ ಕುರುಬ ಸಮುದಾಯದ ರಾಜ್ಯಾಧ್ಯಕ್ಷ ಸಿದ್ದಣ್ಣ ತೇಜು ಅವರು ಛಲ ವಾದಿ ಹಾಗೂ ಶ್ರೀವತ್ಸ ಅವರನ್ನು ಬಂಧಿಸಬೇಕು, ಇಲ್ಲದಿದ್ದರೆ ಉಗ್ರ ಹೋರಾಟ ಮಾಡಿ, ಸರ್ಕಾರಿ ಬಸ್ ಗಳಿಗೆ ಕಲ್ಲು ಹೊಡೆದು, ಕಚೇರಿಗಳಿಗೆ ಬೆಂಕಿ ಹಾಕುತ್ತೇವೆ ಎಂದು ಈ ಹಿಂದೆ ನಗರ ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲೇ ಹೇಳಿಕೆ ನೀಡಿದ್ದರು.
ಅಲ್ಲದೆ, ಹುಬ್ಬಳ್ಳಿ-ಧಾರವಾಡದ ಮತ್ತೂಬ್ಬ ಮುಖಂಡ ಶಿವರಾಜ್ ಮುತ್ತಣ್ಣ ನವರ್ ಎಂಬವರು ಕೂಡ ಛಲವಾದಿ ನಾರಾಯಣಸ್ವಾಮಿ ಅವರಿಗೆ ಜೀವ ಬೆದರಿಕೆ ಹಾಕಿದ್ದಾರೆ. ಆದ್ದರಿಂದ ಈ ರೀತಿ ಹೇಳಿಕೆ ನೀಡುವ ಮೂಲಕ ಜಾತಿ-ಜಾತಿಗಳ ನಡುವೆ ಗಲಾಟೆ ಸೃಷ್ಟಿಸುವುದು, ಬೆದರಿಕೆ ಹಾಕುವುದು ಸರಿಯಲ್ಲ. ಹೀಗಾಗಿ ಸಿದ್ದಣ್ಣ ತೇಜು ಮತ್ತು ಶಿವರಾಜ್ ಮುತ್ತಣ್ಣ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಬಿಜೆಪಿ ಮುಖಂಡರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.