ವಾಷಿಂಗ್ಟನ್: ಟೆಕ್ಸಾಸ್‌ನಲ್ಲಿ ನಿರ್ಮಿಸಲಾದ 90 ಅಡಿ ಎತ್ತರದ ಹನುಮಂತನ ʻಸ್ಟ್ಯಾಚ್ಯೂ ಆಫ್ ಯೂನಿಯನ್’ (Statue of Union) ಕುರಿತು ರಿಪಬ್ಲಿಕನ್ ನಾಯಕ ಅಲೆಕ್ಸಾಂಡರ್ ಡಂಕನ್ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಅಮೆರಿಕ ಕ್ರಿಶ್ಚಿಯನ್ ರಾಷ್ಟ್ರ ಎಂದು ಹೇಳಿದ ಅವರು, ಹಿಂದೂ ದೇವರ ಪ್ರತಿಮೆಯನ್ನು ಟೆಕ್ಸಾಸ್‌ನಲ್ಲಿ ಸ್ಥಾಪಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
“ಟೆಕ್ಸಾಸ್‌ನಲ್ಲಿ ಸುಳ್ಳು ಹಿಂದೂ ದೇವರ ಸುಳ್ಳು ಪ್ರತಿಮೆಯನ್ನು ಏಕೆ ಇಡಲು ನಾವು ಅನುಮತಿಸುತ್ತಿದ್ದೇವೆ? ನಮ್ಮದು ಕ್ರಿಶ್ಚಿಯನ್ ರಾಷ್ಟ್ರ” ಎಂದು ಡಂಕನ್ ಸಾಮಾಜಿಕ ಜಾಲತಾಣ X ನಲ್ಲಿ ಬರೆದು, ಶುಗರ್ ಲ್ಯಾಂಡ್‌ನ ಶ್ರೀ ಅಷ್ಟಲಕ್ಷ್ಮಿ ದೇವಸ್ಥಾನದಲ್ಲಿರುವ ಪ್ರತಿಮೆಯ ವೀಡಿಯೊವನ್ನೂ ಹಂಚಿಕೊಂಡಿದ್ದಾರೆ.
ಇದೇ ವೇಳೆ ಬೈಬಲ್‌ನ “ಎಕ್ಸೋಡಸ್ 20:3-4” ವಾಕ್ಯಗಳನ್ನು ಉಲ್ಲೇಖಿಸಿ, ವಿಗ್ರಹಾರಾಧನೆ ತಪ್ಪು ಎಂಬ ಅಭಿಪ್ರಾಯವನ್ನೂ ಅವರು ಹಂಚಿಕೊಂಡಿದ್ದಾರೆ.
ಈ ಹೇಳಿಕೆಗಳಿಗೆ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಿಂದೂ ಅಮೆರಿಕನ್ ಫೌಂಡೇಶನ್ (HAF) ಈ ಹೇಳಿಕೆಯನ್ನು “ಹಿಂದೂ ವಿರೋಧಿ ಹಾಗೂ ಪ್ರಚೋದನಕಾರಿ” ಎಂದು ಖಂಡಿಸಿದ್ದು, ಟೆಕ್ಸಾಸ್ ರಿಪಬ್ಲಿಕನ್ ಪಕ್ಷಕ್ಕೆ ಈ ಬಗ್ಗೆ ಅಧಿಕೃತ ದೂರು ಸಲ್ಲಿಸಿದೆ. ಪಕ್ಷದ ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವ ಕಾರಣ ಡಂಕನ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.
ಅನೇಕರ ನೆಟಿಜನ್‌ಗಳು ಕೂಡಾ ಪ್ರತಿಕ್ರಿಯೆ ನೀಡಿದ್ದು, ಅಮೆರಿಕ ಸಂವಿಧಾನವು ಪ್ರತಿಯೊಬ್ಬರಿಗೂ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡುತ್ತದೆ ಎಂಬುದನ್ನು ನೆನಪಿಸಿದ್ದಾರೆ. “ವೇದಗಳು ಕ್ರಿಶ್ಚಿಯನ್ ಧರ್ಮಕ್ಕಿಂತ ಸಾವಿರಾರು ವರ್ಷಗಳ ಹಿಂದೆಯೇ ಬರೆಯಲ್ಪಟ್ಟವು. ಕ್ರಿಶ್ಚಿಯನ್ ಧರ್ಮದ ಮೇಲೂ ಅವು ಪ್ರಭಾವ ಬೀರಿವೆ” ಎಂದು ಜೋರ್ಡಾನ್ ಕ್ರೌಡರ್ ಎಂಬ ಬಳಕೆದಾರ ಬರಹದಲ್ಲಿ ತಿಳಿಸಿದ್ದಾರೆ.
2024ರಲ್ಲಿ ಅನಾವರಣಗೊಂಡ ಹನುಮಂತನ “ಒಕ್ಕೂಟದ ಪ್ರತಿಮೆ” ಯುನೈಟೆಡ್ ಸ್ಟೇಟ್ಸ್‌ನ ಅತಿ ಎತ್ತರದ ಹಿಂದೂ ಸ್ಮಾರಕಗಳಲ್ಲಿ ಒಂದಾಗಿದೆ. ಶ್ರೀ ಚಿನ್ನಜೀಯರ್ ಸ್ವಾಮೀಜಿಯವರ ಕಲ್ಪನೆಯ ಈ ಕೃತಿಯು ಅಮೆರಿಕಾದ ಮೂರನೇ ಅತಿ ಎತ್ತರದ ಪ್ರತಿಮೆಯಾಗಿದೆ.