ಹನೂರು: ತಾಲೂಕಿನ ಮಾರ್ಟಳ್ಳಿ ಗ್ರಾಮದ ಸಂದನ ಪಾಳ್ಯದಲ್ಲಿ ಭಾನುವಾರ ರಾತ್ರಿ ಮಗನೇ ತಂದೆಯನ್ನು ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ ಘಟನೆ ನಡೆದಿದೆ.
ಪಾಕಿಯನಾಥನ್ (55) ಹತ್ಯೆಗೀಡಾದವರು . ಆರೋಪಿ ಅವರ ಮಗ ಜಾನ್ಸನ್.
ತನ್ನ ತಂದೆ ಪಾಕಿಯನಾಥನ್ ತನ್ನ ಪತ್ನಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಅಪನಂಬಿಕೆ ಮತ್ತು ಶಂಕೆಯಿಂದಾಗಿ ಈ ಹತ್ಯೆ ನಡೆದಿರುವುದಾಗಿ ಪೊಲೀಸರು ತನಿಖೆಯಲ್ಲಿ ತಿಳಿದುಕೊಂಡಿದ್ದಾರೆ.
ಭಾನುವಾರ ರಾತ್ರಿ ತಂದೆ ಮತ್ತು ಮಗನ ನಡುವೆ ಈ ವಿಚಾರವಾಗಿ ತೀವ್ರ ವಾಗ್ವಾದ ನಡೆದಿದ್ದು, ಆ ಸಮಯದಲ್ಲಿ ಮಾವಿನ ಮರದ ಕೆಳಗೆ ಕುಳಿತಿದ್ದ ತಂದೆಯ ಮೇಲೆ ಜಾನ್ಸನ್ ಕಲ್ಲಿನಿಂದ ಹಲ್ಲೆ ನಡೆಸಿದ್ದು, ಪಾಕಿಯನಾಥನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯ ನಂತರ ಜಾನ್ಸನ್ ಪರಾರಿಯಾಗಿದ್ದಾನೆ.
ಘಟನೆಯ ಬಗ್ಗೆ ಮಾಹಿತಿ ತಿಳಿದ ರಾಮಾಪುರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಬಂದು ತನಿಖೆ ನಡೆಸಿದ್ದಾರೆ. ಪ್ರಕರಣವನ್ನು ದಾಖಲಿಸಿ ಆರೋಪಿ ಜಾನ್ಸನ್ ಅನ್ನು ಪತ್ತೆಹಚ್ಚಲು ಬಲೆ ಬೀಸಿದ್ದಾರೆ.