ದೋಷಯುಕ್ತ ಎಲೆಕ್ಟ್ರಿಕ್ ವಾಹನ ಮಾರಾಟ – ಓಲಾ ವಿರುದ್ಧ ದ.ಕ. ಗ್ರಾಹಕ ನ್ಯಾಯಾಲಯ ತೀರ್ಪು

ಮಂಗಳೂರು: ಓಲಾ ಎಲೆಕ್ಟ್ರಿಕ್ ಟೆಕ್ನಾಲಜೀಸ್ ಪ್ರೈ. ಲಿ. ಕಂಪೆನಿ ದೋಷಯುಕ್ತ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಮಾಡಿದ್ದಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ನ್ಯಾಯಾಲಯ ಗಟ್ಟಿಯಾದ ತೀರ್ಪು ನೀಡಿದೆ.

ಘಟನೆಯ ವಿವರ: ಮಂಗಳೂರಿನ ಸರ್ಕಾರಿ ಸ್ವಾಮ್ಯದ ಸಂಸ್ಥೆಯ ಉದ್ಯೋಗಿ ಉದಯ್ ಕುಮಾರ್ ಬಿ.ಸಿ. ಅವರು ಓಲಾ ಕಂಪನಿಯಿಂದ ₹1.17 ಲಕ್ಷಕ್ಕೆ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದ್ದರು. ಆದರೆ, ಖರೀದಿಸಿದ ಕೇವಲ ಒಂದು ತಿಂಗಳಲ್ಲೇ ಸ್ಕೂಟರ್ ರಸ್ತೆ ಮಧ್ಯೆ ಹಠಾತ್ ನಿಲ್ಲುವ ಸಮಸ್ಯೆ ಎದುರಾಯಿತು.

ಮೊದಲ ಬಾರಿ ದೂರು ನೀಡಿದಾಗ ಓಲಾ ಸಂಸ್ಥೆ ವಾಹನವನ್ನು ರಿಪೇರಿ ಮಾಡಿದರೂ, ಸಮಸ್ಯೆ ಪದೇಪದೇ ಮುಂದುವರಿಯಿತು. ಇದರಿಂದ ಗ್ರಾಹಕರು ತೀವ್ರ ತೊಂದರೆಗೆ ಒಳಗಾದರು. ರಿಪೇರಿಯ ನೆಪದಲ್ಲಿ ಸ್ಕೂಟರ್ ಕಂಪೆನಿಯಲ್ಲೇ ಇರಿಸಿದ್ದರೂ ಶಾಶ್ವತ ಪರಿಹಾರ ಒದಗಿಸಲು ಓಲಾ ವಿಫಲವಾಯಿತು.

ಗ್ರಾಹಕರ ಮೊರೆ:
ಇದರಿಂದ ಬೇಸತ್ತ ಗ್ರಾಹಕರು ಲೀಗಲ್ ನೋಟಿಸ್ ನೀಡಿ, ಬಳಿಕ ಗ್ರಾಹಕರ ಪರಿಹಾರ ಆಯೋಗವನ್ನು ಸಂಪರ್ಕಿಸಿದರು. ವಿಚಾರಣೆ ನಡೆಸಿದ ನ್ಯಾಯಾಲಯ, ಓಲಾ ಕಂಪನಿ ಸೇವಾ ನ್ಯೂನ್ಯತೆ ತೋರಿದೆ ಮತ್ತು ದೋಷಯುಕ್ತ ಉತ್ಪನ್ನ ಮಾರಾಟ ಮಾಡಿದೆ ಎಂದು ತೀರ್ಪು ನೀಡಿದೆ.

ನ್ಯಾಯಾಲಯದ ಆದೇಶ:

-ಓಲಾ ಕಂಪನಿ 45 ದಿನಗಳಲ್ಲಿ ಸ್ಕೂಟರ್‌ನ್ನು ಸಂಚಾರಯೋಗ್ಯವಾಗಿ ರಿಪೇರಿ ಮಾಡಬೇಕು.

-ಅದಕ್ಕೆ ವಿಫಲವಾದರೆ, ಗ್ರಾಹಕರಿಗೆ ₹1.17 ಲಕ್ಷ + 6% ಬಡ್ಡಿ ಪಾವತಿಸಬೇಕು.

-ಸೇವಾನ್ಯೂನ್ಯತೆಗಾಗಿ ₹10,000 ದಂಡ ಮತ್ತು ಪ್ರಕರಣ ವೆಚ್ಚ ₹5,000 ಪಾವತಿಸಬೇಕೆಂದು ಆದೇಶಿಸಲಾಗಿದೆ.

ಈ ಪ್ರಕರಣದಲ್ಲಿ ಗ್ರಾಹಕರ ಪರವಾಗಿ ಮಂಗಳೂರಿನ ವಕೀಲ ತೇಜಕುಮಾರ್ ಡಿ.ಎಂ. ವಾದ ಮಂಡಿಸಿದರು.

error: Content is protected !!