ಮಂಗಳೂರು: ಇಡೀ ವಿಶ್ವವೇ ಬೆರಗುಗಣ್ಣುಗಳಿಂದ ನಿರೀಕ್ಷಿಸುವ, ಹೆಚ್ಚಾಗಿ ತುಳುನಾಡಿನ ಕಲಾವಿದರಂದಲೇ ಮೂಡಿ ಬಂದಿರುವ ಕಾಂತಾರ ಚಾಪ್ಟರ್-1 (Kantara Chapter 1) ಚಿತ್ರದ ಕನ್ನಡ, ಹಿಂದಿ, ತಮಿಳು, ಮಲಯಾಳಂ ಹಾಗೂ ತೆಲುಗು ಭಾಷೆಯ ಟ್ರೇಲರ್ ಔಟ್ ಆಗಿದ್ದು, ಕೆಲವೇ ಕ್ಷಣಗಳಲ್ಲಿ ದಾಖಲೆಯ ವ್ಯೂವ್ಸ್ ಕಂಡಿದೆ. ಕನ್ನಡ ಟ್ರೇಲರೇ ಕೇವಲ ಒಂದು ಗಂಟೆಯ ಅವಧಿಯಲ್ಲಿ 1 ಕೋಟಿಗೂ ಅಧಿಕ ವೀಕ್ಷಣೆ ಕಂಡಿದ್ದು, ಹೊಸ ದಾಖಲೆ ನಿರ್ಮಾಣವಾಗಿದೆ.
ರಿಷಬ್ ಶೆಟ್ಟಿ ಅವರು ಈ ಚಿತ್ರದಲ್ಲಿ ತುಳುನಾಡಿನ ಪ್ರಾಚೀನ ಇತಿಹಾಸ ವೈಭವ, ಸತ್ಯದ ಹಾದಿಯಲ್ಲಿ ನಡೆಯುವ ಜನರು, ಕಾಡು ಜನರ ನಾಗರಿಕತೆ, ದೈವ-ದೇವರ ಕಾರ್ಣಿಕ, ರಕ್ತಪಾತ ಇತ್ಯಾದಿಗಳನ್ನು ಒಳಗೊಂಡಿದ್ದು, ಈ ಬಾರಿ ಕಿರೀಟ ಧರಿಸಿದ ರಾಜನ ಪಾತ್ರ ಕುತೂಹಲ ಮೂಡಿಸಿದೆ. ಈ ಚಿತ್ರದಲ್ಲಿ ರಿಷಬ್ ಶೆಟ್ಟರು ಬಿಲ್ಲು, ಪರಶು ಹಿಡಿದ ರಾಮನ ರೀತಿ ಕಾಣಿಸುತ್ತಿದ್ದಾರೆ. ದಟ್ಟ ಕಾನನದಲ್ಲಿ ದೊಂದಿಗಳ ಬೆಳಕು ಟ್ರೇಲರ್‌ನಲ್ಲಿ ಕಾಣಿಸಿದ್ದು, ಈ ಬಾರಿ ಮತ್ತೊಂದು ದಾಖಲೆ ಬರೆಯುವ ಎಲ್ಲಾ ಲಕ್ಷಣಗಳು ಕಾಣಿಸಿದೆ.
ಆರಂಭದಿಂದಲೂ ಸಾಕಷ್ಟು ಕುತೂಹಲ, ಕಾತುರ ಮೂಡಿಸಿರುವ, ಹೊಂಬಾಳೆ ಫಿಲಂಸ್ (Hombale Films) ನಿರ್ಮಾಣ ಹಾಗೂ ರಿಷಬ್ ಶೆಟ್ಟಿ (Rishab Shetty) ಅವರ ನಟನೆ ಹಾಗೂ ನಿರ್ದೇಶನದ, ವಿಶ್ವವೇಕುತೂಹಲದಿಂದ ನೋಡುತ್ತಿರುವ ಬಹು ನಿರೀಕ್ಷಿತ ʻಕಾಂತಾರ ಚಾಪ್ಟರ್ – 1ʼ ಚಿತ್ರವು ಸಪ್ತ ಭಾಷೆಗಳಲ್ಲಿ ಅಕ್ಟೋಬರ್ 2 ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದ್ದು, ಅದಕ್ಕೂ ಮುನ್ನ ಸೆ.22ರ ಸೋಮವಾರ ಮಧ್ಯಾಹ್ನ 12:45ಕ್ಕೆ ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳ ಟ್ರೇಲರನ್ನು ಆಯಾ ಭಾಷೆಗಳ ಸ್ಟಾರ್ ನಟರುಗಳು ಬಿಡುಗಡೆ ಮಾಡಿದರು.
ಹಿಂದಿ ಟ್ರೇಲರ್‌ನ್ನು ಹೃತಿಕ್ ರೋಷನ್, ತಮಿಳಿನ ಟ್ರೇಲರ್‌ನ್ನು ಶಿವಕಾರ್ತಿಕೇಯನ್, ಮಲಯಾಳಂ ಟ್ರೇಲರ್‌ನ್ನು ಪೃಥ್ವಿರಾಜ್ ಸುಕುಮಾರನ್ ಹಾಗೂ ತೆಲುಗು ಭಾಷೆಯ ಟ್ರೇಲರ್‌ನ್ನು ಪ್ರಭಾಸ್ ಅವರು ಅನಾವರಣ ಮಾಡಿದರು.
ಬಿ. ಅಜನೀಶ್ ಲೋಕನಾಥ್ ಅವರ ಸಂಗೀತ ನಿರ್ದೇಶನ, ಅರವಿಂದ್ ಎಸ್.ಕಶ್ಯಪ್ ಅವರ ಛಾಯಾಗ್ರಹಣ ಹಾಗೂ ಪ್ರಗತಿ ಶೆಟ್ಟಿ ಅವರ ವಸ್ತ್ರ ವಿನ್ಯಾಸ ʻಕಾಂತಾರ-1ʼ ಚಿತ್ರಕ್ಕಿದೆ. ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ ಅವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷವಾಗಿ ತುಳು ಕಲಾವಿದರು ಮುಖ್ಯ ಭೂಮಿಕೆಯಲ್ಲಿದ್ದು, ಚಿತ್ರದಲ್ಲಿ ಲಕ್ಷಕ್ಕೂ ಅಧಿಕ ಮಂದಿ ಬಣ್ಣ ಹಚ್ಚಿರುವುದು ಈ ಚಿತ್ರದ ವಿಶೇಷತೆ.