ಬಂಟ್ವಾಳ: ಹಲವು ಅಪರಾಧ ಪ್ರಕರಣಗಳಲ್ಲಿ ಆರೋಪಿ ಆಗಿದ್ದ ಮಂಜೇಶ್ವರ ತಾಲೂಕಿನ ಕೂಳೂರು ನಿವಾಸು ಅಶ್ರಫ್ ಅಲಿಯಾಸ್ ಚಿಲ್ಲಿ ಅಶ್ರಫ್ (32) ಎಂಬಾತನನ್ನು ವಿಟ್ಲ ಪೊಲೀಸರು ದೀರ್ಘಕಾಲದ ನಂತರ ಬಂಧಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, 2015ರಲ್ಲಿ ವಿಟ್ಲ ಪೇಟೆಯಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ಅಶ್ರಫ್ ಪ್ರಮುಖ ಆರೋಪಿ. 2015ರ ಆಗಸ್ಟ್ 7ರಂದು ಜಗದೀಶ್ ಕಾಮತ್ ಎಂಬವರಿಗೆ ಮೆಣಸಿನ ಪುಡಿ ಎರಚಿ ದರೋಡೆ ನಡೆಸಲಾಗಿತ್ತು. ಈ ಪ್ರಕರಣವನ್ನು ಅ.ಕ್ರ 165/2015, ಕಲಂ 397 IPC ಅಡಿಯಲ್ಲಿ ದಾಖಲಿಸಲಾಗಿದ್ದು, ಆರೋಪಿ ಹಾಜರಾಗದೆ ತಲೆಮರೆಸಿಕೊಂಡ ಕಾರಣ LPC-03/2025ರಂತೆ ವಾರೆಂಟ್ ಜಾರಿಯಾಗಿತ್ತು.
ಇದಲ್ಲದೆ, 2016ರ ಜನವರಿ 23ರಂದು ಕೊಲ್ನಾಡು ಗ್ರಾಮದ ವೈನ್ ಶಾಪ್ ಬಾಗಿಲು ಮುರಿದು ನಗದು ಕಳವು ಮಾಡಿದ ಪ್ರಕರಣದಲ್ಲಿ ಸಹ ಅಶ್ರಫ್ ಆರೋಪಿ. ಈ ಪ್ರಕರಣವನ್ನು ಆ.ಕ್ರ 16/2016, ಕಲಂ 457 ಮತ್ತು 380 IPC ಅಡಿಯಲ್ಲಿ ದಾಖಲಿಸಲಾಗಿತ್ತು. ಆರೋಪಿ ಈ ಪ್ರಕರಣದಲ್ಲಿಯೂ ಹಾಜರಾಗದೆ ತಲೆಮರೆಸಿಕೊಂಡ ಕಾರಣ, ಮಾನ್ಯ ನ್ಯಾಯಾಲಯದಿಂದ 82 ಮತ್ತು 83 ವಾರಂಟ್‌ಗಳು ಜಾರಿಯಾಗಿದ್ದವು.
ಈ ಎರಡೂ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಅಶ್ರಫ್‌ನ್ನು ಪೊಲೀಸರು ಸೆಪ್ಟೆಂಬರ್ 21, 2025ರಂದು ಕೂಳೂರು, ಮಂಜೇಶ್ವರದಲ್ಲಿ ದಸ್ತಗಿರಿ ಮಾಡಿ ಬಂಧಿಸಿದ್ದಾರೆ. ಬಂಧಿತನನ್ನು ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.