ಮಂಗಳೂರು: ಬಿಲ್ಲವ ಸಂಘ (ರಿ) ಉರ್ವ-ಅಶೋಕನಗರ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜನ್ಮದಿನಾಚರಣೆಯ ಉತ್ಸವ ಭವ್ಯವಾಗಿ ನಡೆಯಿತು.
ಕಾರ್ಯಕ್ರಮದ ಉದ್ಘಾಟಕರಾಗಿ ಮಾತನಾಡಿದ ಯಾಮಿನಿ ಬಿಲ್ಡರ್ಸ್ & ಡೆವಲಪರ್ಸ್ ಮಾಲಕರು ಶ್ರೀ ದಾಮೋದರ ದಂಡಕೇರಿ ಅವರು, “ನಾರಾಯಣ ಗುರುಗಳು ಪ್ರತಿಪಾದಿಸಿದ ‘ಒಂದೇ ಜಾತಿ, ಒಂದೇ ಮತ, ಒಂದೇ ದೇವರು’ ಎಂಬ ವಿಚಾರಧಾರೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು” ಎಂದು ಹೇಳಿದರು.
ಹಿರಿಯ ಸಾಹಿತಿ ಡಾ. ಮೀನಾಕ್ಷಿ ರಾಮಚಂದ್ರ ಅವರು ಮಾತನಾಡುತ್ತಾ, “ನಾರಾಯಣ ಗುರುಗಳು ಕೇರಳದಲ್ಲಿ ಸಾಮಾಜಿಕ ಮತ್ತು ಧಾರ್ಮಿಕ ಕ್ರಾಂತಿ ಸಾಧಿಸಿದ ಮಹಾನ್ ಸಂತರು. ಶೂದ್ರ ಮತ್ತು ಕೆಳವರ್ಗದ ಜನರಲ್ಲಿ ಸ್ವಾಭಿಮಾನ ಮತ್ತು ಧೈರ್ಯ ತುಂಬಿದರು. ವಿದ್ಯೆ ಮತ್ತು ಉದ್ಯೋಗಕ್ಕೆ ಅವರು ನೀಡಿದ ಮಹತ್ವ ಅಪಾರ” ಎಂದು ಗುರುಗಳ ಕೊಡುಗೆಯನ್ನು ಹೇಳಿದರು.
ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರು ಶ್ರೀ ಡಿ. ವೇದವ್ಯಾಸ ಕಾಮತ್ ಅವರು ಗುರುಗಳ ಜಯಂತಿಯ ಶುಭಾಶಯಗಳನ್ನು ತಿಳಿಸಿದರು. ಶ್ರೀ ಆರ್. ಪದ್ಮರಾಜ್ ಅವರು ಮಾತನಾಡುತ್ತಾ, “ನಾರಾಯಣ ಗುರುಗಳು ಶಿಕ್ಷಣ ಮತ್ತು ಮಹಿಳಾ ಸಬಲೀಕರಣದಲ್ಲಿ ಕ್ರಾಂತಿ ಮಾಡಿದರು. ಪ್ರೀತಿ ಮತ್ತು ವಿಶ್ವಾಸದಿಂದ ಜೀವಿಸಿದರೆ ದೇವರ ಅನುಗ್ರಹ ಸಿಗುತ್ತದೆ” ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಶ್ರೀ ಐವನ್ ಡಿಸೋಜಾ ಅವರು ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜನ್ಮದಿನಾಚರಣೆಯ ಶುಭಾಶಯಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಖ್ಯಾತ ಮೂತ್ರರೋಗ ತಜ್ಞ ಡಾ. ಸದಾನಂದ ಪೂಜಾರಿ, ಕದ್ರಿ ಶ್ರೀ ಮಂಜುನಾಥ ದೇವಸ್ಥಾನ ಟ್ರಸ್ಟಿ ಶ್ರೀ ರಾಜೇಂದ್ರ ಚಿಲಿಂಬಿ, ಅಂತರರಾಷ್ಟ್ರೀಯ ಪವರ್ಲಿಫ್ಟರ್ ಶ್ರೀ ಸದಾನಂದ ಅಮೀನ್ ಕುದ್ರೋಳಿ, ಗಣಕ ರೇಖಾವಿನ್ಯಾಸಗಾರ ಶ್ರೀ ದಿನಕರ ಡಿ. ಬಂಗೇರ್ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು. SSLC ಮತ್ತು PUC ಪರೀಕ್ಷೆಯಲ್ಲಿ ಅತ್ಯುನ್ನತ ಅಂಕಗಳನ್ನು ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ‘ಪ್ರತಿಭಾ ಪುರಸ್ಕಾರ’ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಏನೆಪೋಯ ವಿಶ್ವವಿದ್ಯಾಲಯದ ಕುಲಪತಿ ಡಾ. ಯೇನಪೋಯ ಅಬ್ದುಲ್ಲ ಕುಂಜಿ, ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಮುಂಬೈನ ಅಧ್ಯಕ್ಷ ಶ್ರೀ ಸೂರ್ಯಕಾಂತ್ ಜೆ. ಸುವರ್ಣ, ನಿಧಿಲ್ಯಾಡ್ ಆಡಳಿತ ನಿರ್ದೇಶಕ ಶ್ರೀ ಪ್ರಶಾಂತ್ ಸನಿಲ್, ಬಾಬಾ ಸಾಹುಕಾರ್ ಪೈ ಪೆಟ್ರೋಲ್ ಪಂಪ್ ಮಾಲಕ ಶ್ರೀ ಕಿರಣ್ ಪೈ ಮತ್ತು ಬಿಲ್ಲವ ಸಂಘದ ಗೌರವ ಅಧ್ಯಕ್ಷ ಡಾ. ಬಿ. ಜಿ. ಸುವರ್ಣ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಚೇತನ್ ಕುಮಾರ್ ಸ್ವಾಗತಿಸಿದರು, ನಿತ್ಯಾ ಹರೀಶ್ ಪ್ರಾಸ್ತಾವಿಕ ಮಾತನಾಡಿದರು. ಗೋಪಾಲ್ ಕೋಟ್ಯಾನ್ ಮತ್ತು ಶ್ರೀನಿವಾಸ್. ಬಿ ಕಾರ್ಯಕ್ರಮ ನಿರೂಪಿಸಿದರು, ಜಯರಾಮ ಕಾರಂದೂರು ವಂದಿಸಿದರು. ಪೂರ್ವಿ ಎಚ್, ಪೂರ್ಣ ಎಚ್ ಪ್ರಾರ್ಥನೆಗೈದರು.