ಹಾಸನ: ಬೇಲೂರಿನ ಪುರಸಭೆ ಆವರಣದಲ್ಲಿರುವ ದೇವಾಲಯದೊಳಗಿನ ಗಣಪನ ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿದ ಪ್ರಕರಣದಲ್ಲಿ ಸಿಸಿಟಿವಿ ಆಧರಿಸಿ ಲೀಲಮ್ಮ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣ ಕೋಮು ಕೋಮುಗಳ ಮಧ್ಯೆ ಗಲಭೆಗೆ ಹುನ್ನಾರ ಎಂದು ಆರೋಪಿಸಿದ್ದ ಬಜರಂಗದಳ ಮತ್ತಿತರ ಹಿಂದೂ ಸಂಘಟನೆಗಳ ಕಾರ್ಯಕರ್ತರು ನಾಳೆ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಸ್ವಯಂ ಪ್ರೇರಿತ ಬಂದ್‌ಗೆ ಕರೆ ನೀಡಿದ್ದರು.
ಗಣಪತಿ ಮೂರ್ತಿಗೆ ಚಪ್ಪಲಿ ಹಾರ ಹಾಕಿದ್ದ ಮಹಿಳೆಯ ಪ್ರವೇಶ ಹಾಗೂ ಹೊರ ಹೋಗಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದನ್ನು ಆಧರಿಸಿ ಪೊಲೀಸರು ತನಿಖೆ ಮುಂದುವರೆಸಿದರು. ಕೊನೆಗೂ ಹಾಸನದ ಗುಡ್ಡೇನಹಳ್ಳಿ ಬಳಿ ಲೀಲಮ್ಮ ಎಂಬ ಮಹಿಳೆಯನ್ನು ಬಾಣಾವರ ಪಿ ಎಸ್ ಐ ಸುರೇಶ್ ನೇತೃತ್ವದ ತಂಡ ಬಂಧಿಸಿದೆ. ಪ್ರಸ್ತುತ ಆಕೆಯನ್ನು ವಿಚಾರಣೆಗೊಳಪಡಿಸಲಾಗಿದೆ.
ಘಟನೆಯ ಬಳಿಕ ದೇವಾಲಯದ ಅಧ್ಯಕ್ಷ ವಿರೂಪಾಕ್ಷ ಅವರು ಬೇಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆರೋಪಿಯನ್ನು ಶೀಘ್ರ ಬಂಧಿಸಬೇಕೆಂದು ಆಗ್ರಹಿಸಿ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಹೀಗಾಗಿ ಪೊಲೀಸರು 8 ತನಿಖಾ ತಂಡಗಳನ್ನು ರಚಿಸಿ, ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು.
ಸಿಸಿಟಿವಿ ದೃಶ್ಯಗಳಲ್ಲಿ ಮಹಿಳೆ ಚಪ್ಪಲಿ ಧರಿಸಿಕೊಂಡು ಒಳ ಹೋಗಿ, ಬರಿಗಾಲಿನಲ್ಲಿ ಹೊರ ಬಂದಿರುವುದು ದೃಢಪಟ್ಟಿತ್ತು. ಇದರಿಂದಲೇ ಆಕೆ ಈ ಕೃತ್ಯ ಎಸಗಿರುವ ಶಂಕೆ ಗಟ್ಟಿಯಾಯಿತು. ಸದ್ಯ ಪೊಲೀಸರು ಲೀಲಮ್ಮನನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.