ಮಂಗಳೂರು: ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ ನವೀಕರಣದ ರೂವಾರಿಯಾದ ಮಾಜಿ ಕೇಂದ್ರ ವಿತ್ತ ಸಚಿವ ಬಿ. ಜನಾರ್ದನ ಪೂಜಾರಿ ಅವರ ನೇತೃತ್ವದಲ್ಲಿ ಮಂಗಳೂರು ದಸರಾ – 2025 ನವರಾತ್ರಿ ಮಹೋತ್ಸವ ಸೆಪ್ಟೆಂಬರ್ 22ರಿಂದ ಅಕ್ಟೋಬರ್ 3ರವರೆಗೆ ನಡೆಯಲಿದೆ ಎಂದು ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ತಿಳಿಸಿದ್ದಾರೆ.
ಕುದ್ರೋಳಿ ಸಭಾಂಗಣದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಸರಾ ಪ್ರಯುಕ್ತ ಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯಿಕ ಹಾಗೂ ಸಾಮಾಜಿಕ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸೆ.22ರಂದು ಸಾಂಸ್ಕೃತಿಕ ಕಾರ್ಯಕ್ರಮವನ್ನು ಎನ್‌ಎಂಪಿಎ ಚೇರ್ಮನ್ ಡಾ.ವೆಂಕಟರಮಣ್ ಅಕ್ಕಚ್ಚುರಾಜು, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮಂಗಳೂರು ವಲಯ ಮುಖ್ಯಸ್ಥ ರಾಜೇಂದರ್ ಕುಮಾರ್ ಉದ್ಘಾಟಿಸಲಿದ್ದಾರೆ. ಸಮಾಜಮುಖಿ ಸೇವೆ ಸಲ್ಲಿಸುತ್ತಿರುವ ಸಾನಿಧ್ಯ ವಿಶೇಷ ಶಾಲೆ ಮಂಗಳೂರು, ವೈಟ್‌ಡೌಸ್ ಮಂಗಳೂರು, ಎಂ ಫ್ರೆಂಡ್ಸ್ ಚಾರಿಟೆಬಲ್ ಟ್ರಸ್ಟ್‌ನ ಸೇವೆಯನ್ನು ಗುರುತಿಸಿ ಈ ಸಂದರ್ಭ ಪುರಸ್ಕರಿಸಲಾಗುವುದು. ಭರತನಾಟ್ಯದಲ್ಲಿ ಗೊಲ್ಡನ್‌ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಾದನೆಗೈದ ರೆಮೋನಾ, ದೀಕ್ಷಾ ಸುವರ್ಣ ಅವರನ್ನು ಗೌರವಿಸಲಾಗುವುದು ಎಂದರು.
ಮಕ್ಕಳ ಪ್ರತಿಭೆಗಳನ್ನು ಉತ್ತೇಜಿಸಲು ಸೆಪ್ಟೆಂಬರ್ 28ರಂದು ಮಕ್ಕಳ ದಸರಾ ಅಂಗವಾಗಿ ಕಿನ್ನಿಪಿಲಿ, ಚಿತ್ರಕಲಾ ಹಾಗೂ ಸಂಗೀತ ಸ್ಪರ್ಧೆಗಳನ್ನು ಬಹುಮಾನಗಳೊಂದಿಗೆ ಆಯೋಜಿಸಲಾಗಿದೆ. ವೈಭವದ ಮಕ್ಕಳ ಮೆರವಣಿಗೆಯೂ ಈ ದಿನ ವಿಶೇಷ ಆಕರ್ಷಣೆಯಾಗಲಿದೆ. ಸೆಪ್ಟೆಂಬರ್ 22ರಿಂದ ಅಕ್ಟೋಬರ್ 2ರವರೆಗೆ ಪ್ರತಿದಿನ ಸಂಜೆ 7.30ಕ್ಕೆ ಒಬ್ಬ ಸಾಧಕಿಯರಿಗೆ ಅಸಾಮಾನ್ಯ ಸ್ತ್ರೀ ಪುರಸ್ಕಾರ – 2025 ಪ್ರದಾನ ಮಾಡಲಾಗುತ್ತದೆ. ಒಂಬತ್ತು ಸಾಧಕಿಯರ ಅಪ್ರತಿಮ ಸೇವೆಯನ್ನು ಗುರುತಿಸಿ ಗೌರವಿಸಲಾಗುವುದು ಎಂದು ಪದ್ಮರಾಜ್ ಹೇಳಿದರು.
ನವರಾತ್ರಿ ಪ್ರಯುಕ್ತ ಪ್ರತಿದಿನವೂ ದುರ್ಗಾ ಹೋಮ, ಚಂಡಿಕಾ ಹೋಮ, ಮಹಿಷಮರ್ದಿನಿ ಹೋಮ, ಸರಸ್ವತಿ ಹೋಮ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ಬೆಳಗ್ಗೆಯಿಂದ ರಾತ್ರಿ ತನಕ ನಡೆಯಲಿವೆ. ಅಕ್ಟೋಬರ್ 3ರಂದು ಶ್ರೀ ಶಾರದಾ ವಿಸರ್ಜನೆ ಹಾಗೂ ಗುರುಪೂಜೆಯೊಂದಿಗೆ ಮಹೋತ್ಸವ ಮುಕ್ತಾಯಗೊಳ್ಳಲಿದೆ.
ಅಕ್ಟೋಬರ್ 2ರಂದು ಸಂಜೆ 4ರಿಂದ ಬಿ. ಜನಾರ್ದನ ಪೂಜಾರಿ ನೇತೃತ್ವದಲ್ಲಿ ನವದುರ್ಗೆ, ಗಣಪತಿ ಮತ್ತು ಶಾರದಾ ಮಾತೆಯ ಭವ್ಯ ಶೋಭಾಯಾತ್ರೆ ನಡೆಯಲಿದೆ. ಶೋಭಾಯಾತ್ರೆಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕ್ಷೇತ್ರಕ್ಕೆ ಮರಳಲಿದೆ. ಮಂಗಳೂರು ದಸರಾ ಸಾಂಸ್ಕೃತಿಕ ವೇದಿಕೆಯಲ್ಲಿ ಈ ಬಾರಿ 40ಕ್ಕೂ ಹೆಚ್ಚು ತಂಡಗಳಿಂದ 1500ಕ್ಕೂ ಅಧಿಕ ಕಲಾವಿದರು ಕಲಾಪ್ರದರ್ಶನ ನೀಡಲಿದ್ದಾರೆ. ಭರತನಾಟ್ಯ, ಜಾನಪದ ನೃತ್ಯ, ಯಕ್ಷಗಾನ, ಸಂಗೀತ, ಜಾದೂ, ನೃತ್ಯ ರೂಪಕ ಸೇರಿದಂತೆ ನಾನಾ ಕಲೆಗಳು ಪ್ರೇಕ್ಷಕರನ್ನು ರಂಜಿಸಲಿವೆ. ಸಾಹಿತ್ಯಾಭಿಮಾನಿಗಳಿಗಾಗಿ ಸೆಪ್ಟೆಂಬರ್ 23ರಂದು ಬಹುಭಾಷಾ ಕವಿಗೋಷ್ಠಿ ಹಾಗೂ ತುಳು ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ. ಅಂಚೆ ಮುಖೇನ ಆಯ್ಕೆಗೊಂಡ ಕವಿತೆಗಳ ಸಂಕಲನವನ್ನು ಈ ವೇಳೆ ಬಿಡುಗಡೆ ಮಾಡಲಾಗುವುದು ಎಂದರು.
ಸೆಪ್ಟೆಂಬರ್ 26ರಂದು ಮಿಸ್ಟರ್ ಮಂಗಳೂರು ದಸರಾ ಕ್ಲಾಸಿಕ್ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ, ಸೆಪ್ಟೆಂಬರ್ 28ರಂದು ದಸರಾ ಮ್ಯಾರಥಾನ್ ನಡೆಯಲಿವೆ. ಮ್ಯಾರಥಾನ್‌ನಲ್ಲಿ 21ಕೆ, 10ಕೆ, 5ಕೆ ಮತ್ತು 2ಕೆ ರನ್‌ಗಳಿಗೆ ಒಟ್ಟು 1 ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ. ಮಂಗಳೂರು ದಸರಾ, ಧಾರ್ಮಿಕ ಭಕ್ತಿ, ಸಾಂಸ್ಕೃತಿಕ ವೈಭವ, ಸಾಹಿತ್ಯ ಚೇತನ, ಮಕ್ಕಳ ಪ್ರತಿಭೆ ಹಾಗೂ ಕ್ರೀಡಾ ಉತ್ಸಾಹದ ಅನನ್ಯ ಸಮನ್ವಯಕ್ಕೆ ಸಾಕ್ಷಿಯಾಗಲಿದೆ ಎಂದವರು ವಿವರಿಸಿದರು.
ಈ ಬಾರಿ ಮೆರವಣಿಗೆಯಲ್ಲಿ ಡಿಜೆ ನೃತ್ಯಕ್ಕೆ ಅವಕಾಶ ಇಲ್ಲ. ಅದು ನಮ್ಮ ಹಿಂದೂ ಸಂಸ್ಕೃತಯೂ ಅಲ್ಲ ಎಂದು ಅವರು ವಿವರಿಸಿದರು.
ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ಜನಾರ್ದನ ಪೂಜಾರಿ ಪರಿಕಲ್ಪನೆಯಲ್ಲಿ ಪುರಣಾದ ಮಹತ್ವವವನ್ನು ಆಧಾರವಾಗಿಟ್ಟುಕೊಂಡು ಮಂಗಳೂರು ದಸರಾ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಮಹಾಭಾರತ ಬನ್ನಿ ವೃಕ್ಷ, ರಾಮ-ರಾವಣ ಯುದ್ಧ, ಮಹಿಷಾಸುರ ಮರ್ಧಿನಿ ದೇವಿಯ ಕಥೆಯನ್ನು ಒಳಗೊಂಡಿದೆ. ಮೆರವಣಿಗೆ ಹೋಗು ರಾಜಬೀದಿಯನ್ನು ವಿದ್ಯುತ್ ದೀಪಗಳಿಂದ ಶೃಂಗರಿಸುವಂತೆ ಕಟ್ಟಡ ಮಾಲಕರಿಗೆ ಅವರು ವಿನಂತಿಸಿದರು.
ಜಯರಾಜ್ ಸೋಮಸುಂದರಂ, ಉಪಾಧ್ಯಕ್ಷ ಉರ್ಮಿಳಾ ರಮೇಶ್, ಸದಸ್ಯರಾದ ಜಗದೀಪ್ ಸುವರ್ಣ, ಕೃತಿಕ್ ಅಮೀನ್, ದೇವೇಂದ್ರ ಪೂಜಾರಿ, ಉಪಾಧ್ಯಕ್ಷ ಬಿಜಿ ಸುವರ್ಣ, ಗೌರವ್, ಹರೀಶ್ ಕುಮಾರ್ ಬೆಳ್ತಂಗಡಿ [ರತೀಶ್ ಕುಮಾರ್, ಚಂದನ್, ಹರಿಕೃಷ್ಣ ಬಂಟ್ವಾಳ್, ರಾಧಾಕೃಷ್ಣ, ಲತೀಶ್ ಕುಮಾರ್, ರಾಧಾಕೃಷ್ಣ ಉಪಸ್ಥಿತರಿದ್ದರು.