ಬಾಗಿಲು ಮುಚ್ಚಿತೇ ಕಾಟಿಪಳ್ಳದ ಮತ್ತೊಂದು ಲಕ್ಕಿ ಸ್ಕೀಮ್!? ಜ್ಯುವೆಲ್ಲರಿ ಬಂದ್, ಗ್ರಾಹಕರು ಕಂಗಾಲು! ಅಕ್ರಮ ದಂಧೆಯಲ್ಲಿ ಕ್ರಿಮಿನಲ್ ಗಳೂ ಶಾಮೀಲು, ಕಠಿಣ ಪೊಲೀಸ್ ಕ್ರಮಕ್ಕೆ ಜನರ ಆಗ್ರಹ!!

ಸುರತ್ಕಲ್: ‌ಸುರತ್ಕಲ್ ಭಾಗದ ಚಿನ್ನಾಭರಣ ಗ್ರಾಹಕರಿಗೆ ಸಿಹಿಸುದ್ದಿ ನೀಡಿದ್ದ ವಫಾ ಲಕ್ಕಿ ಸ್ಕೀಮ್ ನ ಗೋಲ್ಡ್‌ ಆಂಡ್‌ ಡೈಮಂಡ್‌ ಮಳಿಗೆಯ ಬಾಗಿಲು ಮುಚ್ಚಿ ಒಂದು ತಿಂಗಳಾಗಿದ್ದು, ಸ್ಕೀಮ್ ನಲ್ಲಿ ಹಣ ಕಟ್ಟಿದ ಗ್ರಾಹಕರು ಕಂಗಾಲಾಗಿದ್ದಾರೆ. ಸ್ಕೀಮ್ ಮಾಲಕ ದುಬೈಗೆ ಹಾರಿ ಊರಿಗೆ ಬಂದು ಎಲ್ಲವನ್ನು ಸರಿಪಡಿಸುವುದಾಗಿ ಹೇಳಿದ್ದರೂ ಇದು ಕೂಡ ಹತ್ತರಲ್ಲಿ ಹನ್ನೊಂದಾಗಲಿದೆಯೇ ಎಂದು ಗ್ರಾಹಕರು ಆತಂಕಕ್ಕೆ ಒಳಗಾಗಿದ್ದಾರೆ.


ʻವಫಾʼ ಹೆಸರಿನ ಲಕ್ಕಿ ಸ್ಕೀಮ್ ನಡೆಸುತ್ತಿದ್ದು, ಗ್ರಾಹಕರು ಹಣ ಕಟ್ಟಿ ಹತ್ತು ತಿಂಗಳಾದರೂ ಹಣ ವಾಪಸ್‌ ಕೊಟ್ಟಿಲ್ಲ ಎಂದು ಆರೋಪಿಸಿದ ಗ್ರಾಹಕರು ಜ್ಯುವೆಲ್ಲರಿಗೆ ಜಮಾಯಿಸಿ ಗಲಾಟೆ ಮಾಡಿದ್ದು, ಇದರ ವಿಡಿಯೋ ವೈರಲ್‌ ಆಗಿತ್ತು. ಈ ವೇಳೆ ಮಾಲಕ ನಾವು ಪರಾರಿಯಾಗಿಲ್ಲ, ನಮ್ಮ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿದ್ದರು. ಇದನ್ನು ಗ್ರಾಹಕರು ಕೂಡ ನಂಬಿದ್ದರು. ಆದರೆ ಜ್ಯುವೆಲ್ಲರಿ ಮಳಿಗೆ ಒಂದು ತಿಂಗಳಿನಿಂದ ಬಂದ್‌ ಆಗಿದ್ದು ತಾವು ಭರವಸೆ ಕಳೆದುಕೊಂಡಿದ್ದಾಗಿ ಗ್ರಾಹಕರು ತಿಳಿಸಿದ್ದಾರೆ.
ಇತ್ತೀಚೆಗೆಷ್ಟೇ ಕಾಟಿಪಳ್ಳ ಸಂಶುದ್ದಿನ್ ಸರ್ಕಲ್‌ನಲ್ಲಿನ ಬಿಎಂಆರ್ ಬಿಲ್ಡಿಂಗ್‌ನಲ್ಲಿ ಕಾರ್ಯಾಚರಿಸುತ್ತಿದ್ದ ನ್ಯೂ ಇಂಡಿಯಾ ಸ್ಕೀಮ್ ಮುಳುಗಡೆಯಾಗಿತ್ತು. ಈ ಬಗ್ಗೆ ಕೇಸ್‌ ದಾಖಲಾಗಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ನ್ಯೂ ಶೈನ್ ಎಂಟರ್‌ಪ್ರೈಸಸ್‌ನ ಹೆಸರಿನಲ್ಲಿ ನಡೆಯುತ್ತಿದ್ದ ಸ್ಕೀಮ್ ಕೂಡಾ ಬಾಗಿಲು ಬಂದ್‌ ಆಗಿತ್ತು. ಅದೇ ರೀತಿ ರಾಯಲ್‌ ಹೆಸರಲ್ಲಿ ನಡೆಯುತ್ತಿದ್ದ ಲಕ್ಕಿ ಸ್ಕೀಂ ಕೂಡಾ ಬಾಗಿಲು ಬಂದ್‌ ಮಾಡಿದೆ. ಗ್ರೀನ್ ಲೈಟ್ ಎನ್ನುವ ಸ್ಕೀಮ್ ಕಚೇರಿ ಕೂಡ ಮುಚ್ಚಿದ್ದು ಬೋರ್ಡ್ ತೆಗೆದು ಕೆಳಗೆ ಇರಿಸಲಾಗಿತ್ತು. ಇದೀಗ ಅದೇ ಸಾಲಿಗೆ ವಫಾ ಲಕ್ಕಿ ಸ್ಕೀಂ ಮಾಲಕ ಕೂಡಾ ಸೇರಿದ್ದು, ಗ್ರಾಹಕರಿಗೆ ಬರಸಿಡಿಲು ಬಡಿದಂತಾಗಿದೆ. ಲಕ್ಕಿ ಸ್ಕೀಂ ಮೂಲಕ ಚಿನ್ನ, ಬಹುಮಾನ ಗೆಲ್ಲುವ ಕನಸು ಕಾಣುತ್ತಿದ್ದ ಬಡ, ಮುಗ್ಧ ಗ್ರಾಹಕರು ಕಂಗಾಲಾಗಿದ್ದಾರೆ.

ವಫಾ ಲಕ್ಕಿ ಸ್ಕೀಮ್ ಯೋಜನೆಯಲ್ಲಿ 30 ಸಾವಿರಕ್ಕೂ ಹೆಚ್ಚು ಜನರಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ಮೂರು ವರ್ಷದಲ್ಲಿ ಐದು ಸೀಸನ್ ಲಕ್ಕಿ ಸ್ಕೀಮ್ ನಡೆಸಿದ್ದು, ಇದೀಗ ಈ ಸ್ಕೀಂ ಬಲಿಯಾಗಲು ಕಾರಣವೇನು ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಫಾ ಹೆಸರಲ್ಲಿ ಹೊಸಂಗಡಿ, ಬಜ್ಪೆಯಲ್ಲಿ ಫರ್ನೀಚರ್ ಮಳಿಗೆಗಳು‌ ಇದ್ದು ತೂಮಿನಾಡುವಿನಲ್ಲಿ ಫರ್ನೀಚರ್ ತಯಾರಿಕಾ ಘಟಕ, ಕಾಟಿಪಳ್ಳದಲ್ಲಿ ವಫಾ ಬಿಲ್ಡರ್ ಆಂಡ್ ಡೆವಲಪರ್, ಇತ್ತೀಚೆಗಷ್ಟೆ ಸುರತ್ಕಲ್‌ನಲ್ಲಿ ವಫಾ ಗೋಲ್ಡ್‌ ಆಂಡ್‌ ಡೈಮಂಡ್‌ ಮಳಿಗೆ ಆರಂಭಗೊಂಡು ಆಫರ್‌ ಕೊಡುವ ಆಸೆ ಹುಟ್ಟಿಸಲಾಗಿತ್ತು. ಆದರೆ ಇದೀಗ ವಫಾ ಸ್ಕೀಂ ಕೂಡಾ ಗ್ರಾಹಕರ ಆಶಾಗೋಪುರವನ್ನೇ ಬುಡಮೇಲು ಮಾಡಿದೆ.
ಲಕ್ಕಿ ಸ್ಕೀಂಗೆ ಬಹುತೇಕ ಮುಸ್ಲಿಂ ಮಹಿಳೆಯರೇ ಹೆಚ್ಚಿನ ಗ್ರಾಹಕರಾಗಿದ್ದು, ಇದೀಗ ಒಂದೊಂದೇ ಲಕ್ಕಿ ಸ್ಕೀಂಗಳು ಬಾಗಿಲು ಮುಚ್ಚುತ್ತಿದೆ. ಇದರಿಂದ ನಿಯತ್ತಾಗಿ ಲಕ್ಕಿ ಸ್ಕೀಂ ನಡೆಸುತ್ತಿರುವ ಮಾಲಕರೂ ಕಂಗಾಲಾಗಿದ್ದಾರೆ. ಇಂಥ ಲಕ್ಕಿಂ ಸ್ಕೀಂಗೆ ಸೇರುವ ಮುನ್ನ ಗ್ರಾಹಕರು ಎಚ್ಚರಿಕೆ ವಹಿಸುವಂತೆ ಪೊಲೀಸರು ಹೇಳುತ್ತಿದ್ದರೂ ಮುಗ್ಧ ಜನರು ಮಂಗ ಆಗುತ್ತಿದ್ದಾರೆ.

ನ್ಯೂ ಶೈನ್ ಎಂಟರ್‌ಪ್ರೈಸಸ್ ಹೆಸರಿನಲ್ಲಿ ಆಕರ್ಷಕ ಬಹುಮಾನಗಳ ಭರವಸೆ ನೀಡಿ ಜನರಿಂದ ಹಣ ವಸೂಲು ಮಾಡಲಾಗುತ್ತಿತ್ತು. ಕಾರು, ಬೈಕ್, ಫ್ಲ್ಯಾಟ್, ಚಿನ್ನ ನೀಡುವುದಾಗಿ ನಂಬಿಸಿ 9 ತಿಂಗಳು ಪ್ರತಿ ತಿಂಗಳು ₹1000 ಮತ್ತು ಕೊನೆಯ 2 ತಿಂಗಳು ₹1500 ವಸೂಲಿ ಮಾಡಲಾಗಿತ್ತು. ಸುಮಾರು 11 ತಿಂಗಳು ಈ ಸ್ಕೀಮ್ ನಡೆಸಿ, ದ.ಕ. ಹಾಗೂ ಉಡುಪಿ ಜಿಲ್ಲೆಗಳಲ್ಲಿನ 3000ಕ್ಕೂ ಹೆಚ್ಚು ಜನರಿಂದ ₹4.20 ಕೋಟಿ ವಂಚನೆ ನಡೆದಿರುವುದಾಗಿ ಸುರಿಂಜೆ ನಿವಾಸಿ ಶಿವಪ್ರಸಾದ್ ಸುರತ್ಕಲ್ ಠಾಣೆಗೆ ದೂರು ನೀಡಿದ್ದರು.

ಈ ಪ್ರಕರಣದಲ್ಲಿ ಕಾಟಿಪಳ್ಳ ನಿವಾಸಿ ಅಹ್ಮದ್ ಖುರೇಶಿ (34), ನಝೀರ್ ಯಾನೆ ನಾಸೀರ್ (39), ಬಜ್ಪೆ ನಿವಾಸಿ ಮುಹಮ್ಮದ್ ಅಶ್ರಫ್ (43) ಹಾಗೂ ಕೃಷ್ಣಾಪುರ ನಿವಾಸಿ ಮುಹಮ್ಮದ್ ಹನೀಫ್ (50)ನನ್ನು ಸುರತ್ಕಲ್‌ ಪೊಲೀಸರು ಬಂಧಿಸಿ ಪೊಲೀಸರು ಆರೋಪಿಗಳ ಕಚೇರಿಗಳಾದ ಆಯಿಷಾ ಕಾಂಪ್ಲೆಕ್ಸ್, ಬಿ.ಎಂ.ಆರ್ ಕಾಂಪ್ಲೆಕ್ಸ್ ಹಾಗೂ ಶೈನ್ ಮಾರ್ಟ್‌ನಿಂದ ಕಂಪ್ಯೂಟರ್ ಉಪಕರಣಗಳು, ಡ್ರಾ ಕಾಯಿನ್‌ಗಳು, ಲಕ್ಕಿ ಡ್ರಾ ಪೆಟ್ಟಿಗೆ, ರಿಜಿಸ್ಟರ್‌ಗಳು, ಡಿವಿಆರ್, ಬ್ಯಾಂಕ್ ಖಾತೆಗಳ ದಾಖಲೆಗಳು, ಚಿನ್ನಾಭರಣಗಳ ಖರೀದಿ ದಾಖಲೆಗಳು, ನಿವೇಶನ ಹಾಗೂ ವಾಹನ ದಾಖಲೆಗಳನ್ನು ವಶಕ್ಕೆ ಪಡೆದಿದ್ದರು.
ಆತಂಕದ ವಿಚಾರವೆಂದರೆ ಬಂಧಿತ ಅಹ್ಮದ್ ಖುರೇಶಿ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ಎರಡು ಕೊಲೆ ಯತ್ನ ಪ್ರಕರಣಗಳು ಹಾಗೂ ಮಂಗಳೂರು ದಕ್ಷಿಣ ಠಾಣೆಯಲ್ಲಿ ಸರಕಾರಿ ನೌಕರನ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ ದಾಖಲಾಗಿದೆ. ನಝೀರ್ ಮೇಲೂ ಕೊಲೆ ಯತ್ನ ಪ್ರಕರಣವಿದೆ.

ನ್ಯೂ ಇಂಡಿಯಾ ರಾಯಲ್ ಸ್ಕೀಮ್ – ಗ್ರೀನ್ ಲೈಟ್ ಮೋಸ
ಇನ್ನೊಂದು ಪ್ರಕರಣದಲ್ಲಿ ನ್ಯೂ ಇಂಡಿಯಾ ರಾಯಲ್ ಸ್ಕೀಮ್ – ಗ್ರೀನ್ ಲೈಟ್ ಹೆಸರಿನಲ್ಲಿ ಕಾರು, ಬೈಕ್, ಪ್ಲಾಟ್, ಚಿನ್ನದ ಉಂಗುರ, ನಗದು ಮುಂತಾದ ಬಹುಮಾನಗಳ ಭರವಸೆ ನೀಡಲಾಗಿತ್ತು. ತಿಂಗಳಿಗೆ ₹1000 ಪಾವತಿಸಿ ಒಂದು ವರ್ಷದ ಅವಧಿಗೆ ಹಣ ಕಟ್ಟಿಸಿಕೊಳ್ಳಲಾಗಿತ್ತು. ಆದರೆ ಅವಧಿ ಮುಗಿದ ನಂತರ ಯಾರಿಗೂ ಬಹುಮಾನ ಅಥವಾ ಹಣವನ್ನು ಹಿಂತಿರುಗಿಸದೆ ವಂಚನೆ ಮಾಡಲಾಗಿದೆ. ಈ ಸ್ಕೀಮ್ ಮೂಲಕ ದ.ಕ. ಹಾಗೂ ಉಡುಪಿ ಜಿಲ್ಲೆಗಳಲ್ಲಿನ 13 ಸಾವಿರಕ್ಕೂ ಹೆಚ್ಚು ಜನರಿಗೆ ಮೋಸ ನಡೆದಿದ್ದು, ಇದರಿಂದ ಹಲವು ಕೋಟಿ ರೂಪಾಯಿ ವಂಚನೆ ನಡೆದಿದೆ ಎಂದು ಭುಜಂಗ ಎ. ಪೂಜಾರಿ ಸುರತ್ಕಲ್ ಠಾಣೆಗೆ ದೂರು ನೀಡಿದ್ದರು. ಈ ಪ್ರಕರಣದಲ್ಲಿಯೂ ಮುಹಮ್ಮದ್ ಅಶ್ರಫ್ ಮತ್ತು ಮುಹಮ್ಮದ್ ಹನೀಫ್ ಬಂಧಿತರಾಗಿದ್ದನ್ನು ಸ್ಮರಿಸಬಹುದಾಗಿದೆ.

error: Content is protected !!