ಮಂಗಳೂರು: ನಗರದ ಸ್ಟೇಟ್‌ಬ್ಯಾಂಕ್ ಬಳಿ ವ್ಯಕ್ತಿಯೋರ್ವ ಟ್ರಾಫಿಕ್‌ನಲ್ಲಿ ಹೆಡ್‌ಕಾನ್ ಸ್ಟೇಬಲ್‌ರ ಕರ್ತವ್ಯ ನಿರ್ವಹಣೆಗೆ ಅಡ್ಡಿ ಮಾಡಿದ ಆರೋಪದ ಮೇಲೆ ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಟೇಟ್‌ಬ್ಯಾಂಕ್ ವೃತ್ತದ ಬಳಿ, ಒಬ್ಬ ಮಹಿಳೆ ರಸ್ತೆ ದಾಟುತ್ತಿದ್ದ ಸಮಯದಲ್ಲಿ, ಟ್ರಾಫಿಕ್ ಹೆಡ್ ಕಾನ್ಸ್ಟೇಬಲ್ ವಾಹನಗಳನ್ನು ನಿಲ್ಲಿಸುವಂತೆ ಸೂಚನೆ ನೀಡಿದ್ದರು. ಆದರೆ, ನಾಟೆಕಲ್ ನಿವಾಸಿ ಆಸಿಫ್ ಬಾವ ಎಂಬ ಸ್ಕೂಟರ್ ಸವಾರ ಈ ಸೂಚನೆಯನ್ನು ಉಲಂಘಿಸಿ ಸ್ಕೂಟರ್ ಚಲಾಯಿಸಿದ್ದು, ಇದರಿಂದಾಗಿ ಹೆಡ್‌ಕಾನ್ ಸ್ಟೇಬಲ್ ಅವರು ‘ಏಯ್’ ಎಂದು ಹೇಳಿ ಕೈಯಿಂದ ಸವರಿ ಅವನನ್ನು ತಡೆಯಲು ಪ್ರಯತ್ನಿಸಿದರು. ಆ ವೇಳೆ ಆಕ್ರೋಶಗೊಂಡ ಆಸಿಫ್ ಬಾವ ಟ್ರಾಫಿಕ್ ಎಚ್‌ಸಿ ಅವರೊಂದಿಗೆ ವಾಗ್ವಾದ ನಡೆಸಿ, ಅವರ ಕರ್ತವ್ಯ ನಿರ್ವಹಣೆಗೆ ಅಡ್ಡಿ ಮಾಡಿದ ಆರೋಪವಿದೆ.
ಈ ವಾಗ್ವಾದದ ದೃಶ್ಯವನ್ನು ಸಾರ್ವಜನಿಕರೊಬ್ಬರು ವೀಡಿಯೊ ಮಾಡಿದ್ದು, ಅದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ವೀಡಿಯೊವನ್ನು ಪರಿಶೀಲಿಸಿದ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರು, ಸ್ಕೂಟರ್ ಸವಾರನು ಟ್ರಾಫಿಕ್ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಮಾಡಿದ್ದು ಸ್ಪಷ್ಟವಾಗಿದೆ ಎಂದು ತಿಳಿಸಿದ್ದಾರೆ. ಇದರ ನಂತರ, ಆರೋಪಿಯ ವಿರುದ್ಧ ಕರ್ತವ್ಯಕ್ಕೆ ಅಡ್ಡಿ ಮತ್ತು ಪೊಲೀಸ್ ಅಧಿಕಾರಿಯನ್ನು ನಿಂದಿಸಿದ್ದು ಸೇರಿದಂತೆ ಪ್ರಕರಣ ದಾಖಲಿಸಲು ಸೂಚನೆ ನೀಡಿದ್ದರು.
ಈ ಸೂಚನೆಯ ಮೇರೆಗೆ, ಆಸಿಫ್ ಬಾವ ವಿರುದ್ಧ ನಗರ ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.