ಬೆಂಗಳೂರು: ʻಗೊಂದಲವನ್ನು ಸರಿಪಡಿಸದ ಹೊರತು ಜಾತಿಗಣತಿ ಬೇಡ. ಒಂದು ವೇಳೆ ಗೊಂದಲದ ನಡುವೆ ಜಾತಿಗಣತಿ ಮುಂದುವರಿಸಿದರೆ ತೊಂದರೆ ಬರಬಹುದುʼ ಎಂದು ಗುರುವಾರ ಬೆಂಗಳೂರಿನಲ್ಲಿ ನಡೆದ ಸಂಪುಟ ಸಭೆಯಲ್ಲಿ ಕೆಲವು ಮಂದಿ ಸಚಿವರು ಮುಖ್ಯಮಂತ್ರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಕ್ರಿಶ್ಚಿಯನ್ ಬ್ರಾಹ್ಮಣ, ಕ್ರಿಶ್ಚಿಯನ್ ಒಕ್ಕಲಿಗ, ಕ್ರಿಶ್ಚಿಯನ್ ಲಿಂಗಾಯತ, ಕ್ರಿಶ್ಚಿಯನ್ ಕುರುಬ, ಕ್ರಿಶ್ಚಿಯನ್ ದಲಿತ ಎಂಬಿತ್ಯಾದಿಯಾಗಿ ಹಿಂದೂ ಜಾತಿಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಜೋಡಿಸಿ ಜಾತಿ ಸಮೀಕ್ಷೆಯಲ್ಲಿ ಸೇರಿಸಲಾಗಿತ್ತು. ಈ ಪಟ್ಟಿಗೆ ವಿಪರೀತ ವಿರೋಧ ವ್ಯಕ್ತವಾಗಿತ್ತು. ವಿಪಕ್ಷಗಳು, ಹಿಂದೂ ಸಮುದಾಯ ಮಾತ್ರವಲ್ಲ, ಸಂಪುಟ ಸಭೆಯಲ್ಲಿ ಖುದ್ದು ಸಚಿವರೇ ವಿರೋಧ ವ್ಯಕ್ತಪಡಿಸಿದ್ದಾರೆ. ಇಷ್ಟೆಲ್ಲಾ ವಿವಾದಗಳ ಮಧ್ಯೆ ಜಾತಿಗಣತಿ ಮಾಡಬೇಕಾ? ಸದ್ಯಕ್ಕೆ ಬೇಡ ಮುಂದೂಡಿ ಎಂದು ಕೆಲವು ಮಂದಿ ಸಚಿವರು ಸಿಎಂಗೆ ಆಗ್ರಹಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ, ಸಂತೋಷ್ ಲಾಡ್, ಮುನಿಯಪ್ಪ, ಭೈರತಿ ಸುರೇಶ್ ಮಾತ್ರ ಜಾತಿಗಣತಿಯನ್ನು ಈಗಿನ ರೀತಿಯಲ್ಲೇ ಮುಂದುವರಿಸಲು ಒಲವು ತೋರಿದ್ದಾರೆ. ಬಹುತೇಕ ಸಚಿವರು ಸಮೀಕ್ಷೆ ಮುಂದೂಡಿ ಎಂದು ಆಗ್ರಹಿಸಿದ್ದಾರೆ.
ಸಚಿವರೇ ಹೀಗೆ ವಿರೋಧ ವ್ಯಕ್ತಪಡಿಸುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಬೇಸರಗೊಂಡಿದ್ದಾರೆ. ಒಂದು ಹಂತದಲ್ಲಿ ಸಿಎಂ ಸಿದ್ದರಾಮಯ್ಯ ಮಾತಿಗೂ ಅವಕಾಶ ನೀಡದಂತೆ ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಾತಿಗಣತಿ ಗೊಂದಲದ ಬಗ್ಗೆ ಟೇಬಲ್ ಕುಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಚಿವರ ಆಕ್ರೋಶಕ್ಕೆ ಸಿಡಿಮಿಡಿಗೊಂಡ ಸಿಎಂ ಕುರ್ಚಿ ಮೇಲಿಂದ ಎದ್ದು ಅತ್ತಿತ್ತ ಓಡಾಡಿದ್ದಾರೆ. ಸಂಪುಟ ಸಭೆಯಲ್ಲಿ ಹೀಗೆ ಎಂದೂ ಸಿದ್ದರಾಮಯ್ಯ ಎದ್ದು ನಿಂತು ಓಡಾಡಿದ್ದೇ ಇಲ್ಲ. ಅಷ್ಟೇ ಅಲ್ಲ, ತಮ್ಮನ್ನು ಜಾತಿವಾದಿ ಎಂಬಂತೆ ಬಿಂಬಿಸುತ್ತಿದ್ದಾರೆ ಎಂದರು. ಅಷ್ಟೇ ಅಲ್ಲ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಿಗೆ ಜಾತಿ ಜೊತೆಗೆ ಕ್ರಿಶ್ಚಿಯನ್ ಧರ್ಮವನ್ನು ಸೇರಿಸಿರುವ ಕಲಂಗಳನ್ನು ತೆಗೆಯುವಂತೆ ಸೂಚನೆ ನೀಡಿದ್ದಾರೆ. ಈ ಮೂಲಕ ಕಳೆದ ಕೆಲವು ದಿನಗಳಿಂದ ಎದ್ದಿರುವ ವಿವಾದಗಳಿಗೆ ತೆರೆ ಎಳೆಯಲು ಸಿಎಂ ಮುಂದಾಗಿದ್ದಾರೆ.
ಇದೇ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ಇಂದು ಸಂಪುಟ ಸಹೋದ್ಯೋಗಿಗಳ ಸಭೆ ನಡೆಯುತ್ತಿದೆ. ಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಸಚಿವರಾದ ಹೆಚ್.ಕೆ.ಪಾಟೀಲ್, ಈಶ್ವರ ಖಂಡ್ರೆ, ಸಂತೋಷ್ ಲಾಡ್, ಭೈರತಿ ಸುರೇಶ್, ಎಂಬಿ ಪಾಟೀಲ್, ಶಿವರಾಜ್ ತಂಗಡಗಿ ಸೇರಿದಂತೆ ಕೆಲ ಸಚಿವರು ಭಾಗಿಯಾಗಿದ್ದಾರೆ.