ಮಂಗಳೂರು: ಹಲವರು ಕ್ರಿಮಿನಲ್ ಪ್ರಕರಣಗಳ ಆರೋಪಿ, ಕುಖ್ಯಾತ ರೌಡಿ ಶೀಟರ್ ನಜೀಮ್ @ ನಜ್ಜು (30) ಎಂಬಾತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಟ್ವಾಳ ತಾಲೂಕಿನ ನರಿಗಾನ ಗ್ರಾಮದ ಪಟ್ಟುಲಿಕೆ ನಿವಾಸಿ ನಜೀಮ್, ಕೊಣಾಜೆ, ಉಳ್ಳಾಲ, ಮಂಗಳೂರು ಉತ್ತರ, ಬೇಗೂರು (ಬೆಂಗಳೂರು ನಗರ) ಹಾಗೂ ಭಟ್ಕಳ ಪೊಲೀಸ್ ಠಾಣೆಗಳಲ್ಲಿ ಕೊಲೆ, ಸುಲಿಗೆ, ದಾಳಿ, ಎನ್‌ಡಿಪಿಎಸ್ ಹೀಗೆ 8 ಗಂಭೀರ ಪ್ರಕರಣಗಳು ಸೇರಿ ಹಲವು ಪ್ರಕರಣಗಳ ಆರೋಪಿ ಎಂದು ಗುರುತಿಸಲ್ಪಟ್ಟಿದ್ದಾನೆ.
ಜಾಮೀನು ಪಡೆದ ಬಳಿಕ ಒಂದೂವರೆ ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ಪರಾರಿಯಾಗಿದ್ದ ಆರೋಪಿ ವಿರುದ್ಧ ವಾರೆಂಟ್ ಹಾಗೂ ಪ್ರೋಕ್ಲಮೇಷನ್ ಹೊರಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಾಚರಣೆಯಲ್ಲಿ ಬೆಂಗಳೂರಿನಿಂದ ಪತ್ತೆ ಹಚ್ಚಿ ಪೊಲೀಸರು ಬಂಧಿಸಿದ್ದಾರೆ.
ರೌಡಿ ಶೀಟರ್ ನಜೀಮ್ @ ನಜ್ಜು ವಿರುದ್ಧ ಅಕ್ರಮ ಸಭೆ, ಗಲಭೆ, ಅಕ್ರಮ ಪ್ರವೇಶ, ಬೆದರಿಕೆ, ಕೊಲೆ ಯತ್ನ, ಅಪರಾಧಕ್ಕೆ ಪ್ರೇರಣೆ, ಉದ್ದೇಶಪೂರ್ವಕ ಅವಮಾನ, ಗುಂಪಿನ ಸಾಮೂಹಿಕ ಹೊಣೆಗಾರಿಕೆ, ಸ್ವಯಂ ದೇಹಕ್ಕೆ ಹಾನಿ ಮಾಡುವುದು, ಆಯುಧ ಬಳಸಿ ಗಾಯಗೊಳಿಸುವುದು, ಸುಲಿಗೆ, ಅಪಹರಣ, ಅಕ್ರಮ ಬಂಧನ, ಎನ್‌ಡಿಪಿಎಸ್ ಕಾಯ್ದೆ, ಸೇರಿ 2015ರಿಂದ 2023ರ ವಿವಿಧ ಠಾಣೆಗಳಲ್ಲಿ ಹಲವು ಪ್ರಕರಣ ದಾಖಲಾಗಿದೆ.
ಮಂಗಳೂರು ದಕ್ಷಿಣ ಉಪ ಆಯುಕ್ತರ ಮಾರ್ಗದರ್ಶನದಲ್ಲಿ ಕೊಣಾಜೆ ಠಾಣೆಯ ಪೊಲೀಸರು ದಿನೇಶ್, ಶರೀಫ್ ಮತ್ತು ರಮೇಶ್ ಅವರ ಶ್ರಮದಿಂದ ಈ ಬಂಧನ ಸಾಧ್ಯವಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.