ಹುಟ್ಟಿನಿಂದಲೇ 3 ಕಿಡ್ನಿ ಹೊಂದಿದ್ದ ವ್ಯಕ್ತಿಗೆ ಮೆಡಿಕವರ್‌ನಲ್ಲಿ ಶಸ್ತ್ರಚಿಕಿತ್ಸೆ

ಬೆಂಗಳೂರು : ಹುಟ್ಟಿನಿಂದಲೇ 3 ಕಿಡ್ನಿ ಹೊಂದಿರುವುದನ್ನು ತಿಳಿಯದೇ ಇದ್ದ ವ್ಯಕ್ತಿ, ಕಳೆದ ಎರಡು ವರ್ಷಗಳಿಂದ ಹೊಟ್ಟೆಯ ಎಡಭಾಗದ ನೋವು ಹಾಗೂ ಪದೇಪದೇ ಮೂತ್ರ ಸೋಂಕಿನಿಂದ ಬಳಲುತ್ತಿದ್ದರು. ವೈಟ್‌ಫೀಲ್ಡ್‌ನ ಮೆಡಿಕವರ್ ಆಸ್ಪತ್ರೆಯಲ್ಲಿ ನಡೆದ ಶಸ್ತ್ರಚಿಕಿತ್ಸೆಯಲ್ಲಿ 3ನೇ ಕಿಡ್ನಿಯನ್ನು ಯಶಸ್ವಿಯಾಗಿ ತೆಗೆದುಹಾಕಲಾಗಿದೆ.

ನೋವಿನ ಮೂಲ ತಿಳಿಯಲು ಸ್ಕ್ಯಾನಿಂಗ್‌ ಮಾಡಿದಾಗ ಎಡಭಾಗದಲ್ಲಿ ಎರಡು ಕಿಡ್ನಿಗಳು ಇರುವ ಅಪರೂಪದ ಸ್ಥಿತಿ ಪತ್ತೆಯಾಯಿತು. ಎಡ ಕಿಡ್ನಿಯು ಎರಡು ಭಾಗಗಳಾಗಿ ವಿಭಜನೆಯಾಗಿದ್ದು, ಮೇಲಿನ ಭಾಗವು ಮೂತ್ರನಾಳದಿಂದ ಮುಚ್ಚಿಕೊಂಡಿದ್ದರಿಂದ ಸಂಪೂರ್ಣ ಹಾಳಾಗಿ 10 ಸೆಂ.ಮೀ ಗಾತ್ರಕ್ಕೆ ಉಬ್ಬಿ ಬಲೂನಿನಂತೆ ಬದಲಾಗಿತ್ತು. ಇದರಿಂದ ತೀವ್ರ ನೋವು ಹಾಗೂ ಮೂತ್ರ ಸೋಂಕುಗಳು ಉಂಟಾಗುತ್ತಿದವು.

ಡಾ. ಪ್ರಮೋದ್ ಎಸ್, ರೋಬೊಟಿಕ್ ಯೂರಾಲಜಿಸ್ಟ್ ಅವರ ನೇತೃತ್ವದಲ್ಲಿ ವೈದ್ಯರ ತಂಡವು ರೋಬೋಟಿಕ್ ಶಸ್ತ್ರಚಿಕಿತ್ಸೆ ಮೂಲಕ (Nephrectomy) ಹಾಳಾದ ಮೇಲಿನ ಭಾಗವನ್ನು ತೆಗೆದುಹಾಕಿದರು. ಶಸ್ತ್ರಚಿಕಿತ್ಸೆಯ ವೇಳೆ ಕೆಳಗಿನ ಆರೋಗ್ಯಕರ ಕಿಡ್ನಿಯ ರಕ್ತನಾಳಗಳನ್ನು ಸುರಕ್ಷಿತಗೊಳಿಸಿ, ಮೇಲಿನ ಭಾಗವನ್ನು ಯಶಸ್ವಿಯಾಗಿ ತೆಗೆಯಲಾಯಿತು.

ರೋಗಿ ಶಸ್ತ್ರಚಿಕಿತ್ಸೆಯನ್ನು ಸುಗಮವಾಗಿ ಸಹಿಸಿಕೊಂಡಿದ್ದು, ಶಸ್ತ್ರೋತ್ತರ ಚೇತರಿಕೆಯೂ ಉತ್ತಮವಾಗಿದೆ. ಪ್ರಸ್ತುತ ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ.
ಡಾ. ಪ್ರಮೋದ್ ಎಸ್ ಹೇಳಿದರು: “ಇದು ಅಪರೂಪ ಹಾಗೂ ಸವಾಲಿನ ಪ್ರಕರಣವಾಗಿತ್ತು. ರೋಬೋಟಿಕ್ ತಂತ್ರಜ್ಞಾನದಿಂದ ನಾವು ನಿಖರವಾಗಿ ಶಸ್ತ್ರಚಿಕಿತ್ಸೆ ಮಾಡಿ ಆರೋಗ್ಯಕರ ಕಿಡ್ನಿಯನ್ನು ಕಾಪಾಡುವಲ್ಲಿ ಯಶಸ್ವಿಯಾದೆವು. ಇದೀಗ ರೋಗಿಗೆ ಪದೇಪದೇ ಮೂತ್ರ ಸೋಂಕು ಹಾಗೂ ತೀವ್ರ ನೋವು ಇರುವುದಿಲ್ಲ.”

error: Content is protected !!