ಬಂದರೋ ಬಂದರೋ ಗುಂಡುರಾಯರೋ…. ಬಂದರೋ ಹೋದರೋ ಗುಂಡುರಾಯರೋ… ಕಣ್ಣಿಗೆ ಕಾಣದೇ ಮಾಯವಾದರೋ…. ಮರಳು-ಕೆಂಪು ಕಲ್ಲು ಸಮಸ್ಯೆಯ ವಿರುದ್ಧ ಬಿಜೆಪಿಯಿಂದ ಧರಣಿ, ಬಾವ ಬಂದರೋ ಧಾಟಿಯ ಹಾಡಿನ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪು ಕಲ್ಲು ಹಾಗೂ ಮರಳಿನ ಸಮಸ್ಯೆಗೆ ನೇರ ಕಾರಣವಾಗಿ ಜನಸಾಮಾನ್ಯರ ಬದುಕಿಗೆ ತೀವ್ರ ಸಂಕಷ್ಟ ತಂದೊಡ್ಡಿದೆ ಎಂದು ಆರೋಪಿಸಿ ಬಿಜೆಪಿ ವತಿಯಿಂದ ಮಂಗಳೂರಿನ ಮಿನಿ ವಿಧಾನ ಸೌಧದ ಎದುರು ಇಂದು ಬಿಜೆಪಿ ಬೃಹತ್‌ ಪ್ರತಿಭಟನಾ ಧರಣಿ ಹಮ್ಮಿಕೊಂಡಿತು.

ಮರಳು ಸಮಸ್ಯೆಯಿಂದ ಜಿಲ್ಲೆಯ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಸ್ಥಿತಿ ಎದುರಾಗಿದೆ ಎಂದು ಆರೋಪಿಸಿದರು ಬಿಜಪಿಗರು ಆಡಳಿತ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ, ಘೋಷಣೆಗಳು, ಧಿಕ್ಕಾರಗಳನ್ನು ಕೂಗಿದರು. ಅಲ್ಲದೆ ಧರಣಿಯ ಮಧ್ಯದಲ್ಲಿ ಭಜನೆ ಹಾಡುವ ಮೂಲಕ ಸರ್ಕಾರದ ಸಾತ್ವಿಕ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಧರಣಿಯ ಮುಂಭಾಗ ಕೆಂಪು ಕಲ್ಲುಗಳನ್ನು, ಮರಳನ್ನು ಹೊತ್ತುಕೊಂಡು ಬಂದರು. ಮರಳನ್ನು ಸಾರಣೆ ಮಾಡಿ, ಬುಟ್ಟಿಗಳಿಗೆ ಹಾಕಿ ಕಾರ್ಮಿಕರು ಕೆಲಸವಿಲ್ಲದೆ ಪರದಾಡುತ್ತಿದ್ದಾರೆ ಎಂದು ತೋರಿಸಿಕೊಟ್ಟರು.

ಬಂದರೋ ಬಂದರೋ ಬಾವ ಬಂದರೋ ಧಾಟಿಯಲ್ಲೇ ʻಬಂದರೋ ಬಂದರೋ ಗುಂಡುರಾಯರೋ…. ಬಂದರೋ ಹೋದರೋ ಗುಂಡುರಾಯರೋ… ಕಣ್ಣಿಗೆ ಕಾಣದೇ ಮಾಯವಾದರೋ….ʼ ಎಂದು ಹಾಡಿನ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾಯರ ವಿರುದ್ಧ ಮಾತ್ರವಲ್ಲದೆ ಇಡೀ ಹಾಡಿನ ಮೂಲಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸ್ಪೀಕರ್‌ ಖಾದರ್‌ ಸಹಿತ ಹಲವರನ್ನು ಎಳೆದು ತಂದು ಹಾಡಿನಲ್ಲೇ ವ್ಯಂಗ್ಯ ಮಾಡಿ ತಿವಿದಿದ್ದಾರೆ.

ಭರತ್‌ ಶೆಟ್ಟಿ ವಾಗ್ದಾಳಿ
ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮಂಗಳೂರು ದಕ್ಷಿಣ ಶಾಸಕ ಭರತ್‌ ಶೆಟ್ಟಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ಅನೇಕ ತಿಂಗಳಿನಿಂದ ಸರ್ಕಾರಕ್ಕೆ ಕಲ್ಲು-ಮರಳು ಸಮಸ್ಯೆಗಳ ಬಗ್ಗೆ ಮನವಿ ಮಾಡಿದರೂ ಸರ್ಕಾರ ಸ್ಪಂದಿಸಲಿಲ್ಲ. ಇದೀಗ ನಾವು ಧರಣಿ ಕುಳಿತಿದ್ದು, ಮುಂದಿನ ದಿನಗಳಲ್ಲಿ ಸಮಸ್ಯೆ ಪರಿಹಾರವಾಗದಿದ್ದರೆ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.

ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಕ್ಯಾಪ್ಟನ್!
ಬೃಹತ್ ಪ್ರತಿಭಟನಾ ಧರಣಿ ಗೆ ಚಾಲನೆ ನೀಡಿ ಮಾತನಾಡಿದ ಸಂಸದ ಕ್ಯಾ. ಬ್ರಿಜೇಶ್ ಚೌಟ, ಸಮಸ್ಯೆಗೆ ಉತ್ತರ ಹುಡುಕುವ ಪ್ರಯತ್ನವನ್ನು ಸರಕಾರ ಮಾಡುತ್ತಿಲ್ಲ. ದಿನೇಶ್ ಗುಂಡೂರಾವ್ ಹೆಸರಿಗೆ ಮಾತ್ರ ಉಸ್ತುವಾರಿ. ಆದರೆ ಸ್ಪೀಕರ್ ಯು.ಟಿ. ಖಾದರ್ ಉಸ್ತುವಾರಿ ನಡೆಸುತ್ತಿದ್ದಾರೆ. ಸಮಸ್ಯೆಗೆ ಅವರೇ ಕಾರಣ. ಅಕ್ರಮವಾಗಿ ನಡೆಯಬೇಕು ಎಂಬ ಕಾರಣಕ್ಕೆ ಇದನ್ನು ಕಾನುನು ಬದ್ದವಾಗಿ ಮಾಡುತ್ತಿಲ್ಲ ಅನಿಸುತ್ತಿದೆ. ಸರಕಾರಕ್ಕೆ ದ.ಕ ಜಿಲ್ಲೆಯ ಯಾವುದೆ ಸಮಸ್ಯೆಗೆ ಸ್ಪಂದಿಸಬಾರದೆಂಬ ಭಾವನೆ ಇದೆ. ಜನ ಕಾಂಗ್ರೆಸ್ ಪರ ಇಲ್ಲ ಎಂಬ ಕಾರಣಕ್ಕೆ ಹೀಗೆ ಮಾಡುತ್ತಿದ್ದಾರೆ.‌ಸರಕಾರ ಜಿಲ್ಲೆಯ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಸ್ಯೆ ಬಗೆಹರಿಸಬೇಕು. ಇದು ಸಾಂಕೇತಿಕ ಹೋರಾಟ. ಎಚ್ಚರಿಕೆಯ ಪ್ರತಿಭಟನೆ. ಮುಂದಿನ‌ ದಿನಗಳಲ್ಲಿ ಜನಾಂದೋಲನ ರೂಪಿಸಲಾಗುವುದು ಎಂದರು.

ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ: ಕುಂಪಲ
ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಕೆಂಪುಕಲ್ಲು, ಮರಳು ಪೂರೈಸಲು ಒತ್ತಾಯಿಸಿ ತಾಲೂಕು ಕೇಂದ್ರಗಳ ಎದುರು ಪ್ರತಿಭಟನೆ ನಡೆಸಲಾಗಿತ್ತು. ವಿಧಾನ ಸಭೆ, ಪರಿಷತ್ತಿನಲ್ಲಿಯೂ ಶಾಸಕರು ಗಮನ ಸೆಳೆದಿದ್ದರು. ಅನಂತರ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಮನವಿ ಮಾಡಲಾಗಿತ್ತು. ಅಧಿಕಾರಿಗಳಿಗೂ ಮನವಿ ಮಾಡಲಾಗಿತ್ತು. ಉಸ್ತುವಾರಿ ಸಚಿವರು ಸಭೆ ನಡೆಸಿ ಸನಸ್ಯೆ ಬಗೆಹರಿಸಿಲ್ಲ. ಸಿಎಂ ಎಲ್ಲ ಸಮಸ್ಯೆ ಕೇಳಿದರೂ ಪರಿಹಾರ ಕ್ರಮ ತೆಗೆದುಕೊಂಡಿಲ್ಲ. ಸ್ಪೀಕರ್ ಖಾದರ್ ಕೂಡ ವಿಫಲರಾಗಿದ್ದಾರೆ. ಕಾರ್ಮಿಕ ವರ್ಗ ಕಂಗಾಲಾಗಿದ್ದಾರೆ. ಸಂಜೆಯವರೆಗೆ ಧರಣಿ ನಡೆಸಲಾಗುವುದು. ಸಮಸ್ಯೆ ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದರು.

ಹಾಡಿನ ಮೂಲಕ ಸಿಡಿದೆದ್ದ ಭಾಗೀರತಿ ಮುರುಳ್ಯ
ಸುಳ್ಯ ಶಾಸಕಿ ಭಾಗೀರತಿ ಮುರುಳ್ಯ ಅವರು, ರೋಗ ಬಂತದು ಜೋಪಾನ, ಮನೆ ಕಟ್ಲಿಕ್ಕೆ ಕಲ್ಲು ಇಲ್ಲ, ಸಾರಣೆಗೆ ಹೊಯ್ಗೆ ಇಲ್ಲʼ ಎಂದು ಹಾಡಿದರಲ್ಲದೆ, ತಮ್ಮ ವಿಧಾನಸಭಾ ಕ್ಷೇತ್ರವಾದ ಸುಳ್ಯದಲ್ಲಿ ಕಲ್ಲಿನ ಲಾರಿಗೆ ಲೋನ್‌ ಮಾಡಿ ಇದೀಗ ಲೋನ್‌ ಕಟ್ಟಲಾಗದೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ಇಷ್ಟೆಲ್ಲಾ ಆದರೂ ಸಿದ್ದರಾಮಯ್ಯ ಇನ್ನೂ ನಿದ್ದೆಯಲ್ಲಿಯೇ ಇದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸಿಗರೇ ನೀವು ನಿಜವಾಗಿಯೂ ಮನುಷ್ಯರಾ?
ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ ಮಾತಾಡಿ, ಮರಳು ಕಲ್ಲಿನ ಅಭಾವದಿಂದಾಗಿ ಒಂದು ಹೊತ್ತಿನ ಊಟಕ್ಕೂ ಜನರು ತತ್ವಾರ ಪಡುತ್ತಿದ್ದಾರೆ.‌ ಕಾಂಗ್ರೆಸಿಗರೇ ನೀವು ಮನುಷ್ಯರಾ, ನಿಮಗೆ ಕಣ್ಣಿದೆಯಾ? ನಿಮಗೆ ಹೃದಯ ಇದೆಯಾ? ನಿಮಗೆ ಮನುಷ್ಯತ್ವ ಇದೆಯಾ? ನಿಮಗೆ ನಿಜವಾಗಿಯೂ ಮನುಷ್ಯತ್ವ, ಹೃದಯ, ಜಿಲ್ಲೆಯ ಮೇಲೆ ಅಭಿಮಾನ ಇದ್ರೆ ಜಿಲ್ಲೆಯ ಬಡವರ, ಕೂಲಿಕಾರ್ಮಿಕರ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಿಎಂ ಸಿದ್ದರಾಮಯ್ಯರಲ್ಲಿ, ಉಸ್ತುವಾರಿ ಸಚಿವರತ್ರ ಪ್ರಶ್ನೆ ಮಾಡಿದ್ದೀರಾ? ನೀವು ನಿಜವಾಗಿಯೂ ಹೃದಯತವಂತರೇ ಅಲ್ಲ, ನೀವು ಕಿವುಡರು, ಕಣ್ಣಿಲ್ಲದ ಕುರುಡರು ಎಂದು ಜಿಲ್ಲೆಯ ಕಾಂಗ್ರೆಸ್‌ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇಂಥ ಪರಿಸ್ಥಿತಿ ಎಂದೂ ಬಂದಿರಲಿಲ್ಲ: ವೇದವ್ಯಾಸ ಕಾಮತ್
ಕೆಂಪು, ಕಲ್ಲು, ಮರಳು ಸಮಸ್ಯೆಯಿಂದ ಜಿಲ್ಲೆಯ ಕಟ್ಟಡ ಕಾಮಗಾರಿ, ಕೂಲಿ ಕಾರ್ಮಿಕರ ಮೇಲೆ ಅಷ್ಟೇ ಅಲ್ಲ ಇಡೀ ಜಿಲ್ಲೆಯ ಮೇಲೆ ಪರಿಣಾಮ ಬೀರಿದೆ. ಕಲ್ಲು ಮರಳು ಜಿಲ್ಲೆಯ ಆರ್ಥಿಕತೆಯನ್ನು ರೂಪಿಸುತ್ತಿದ್ದು, ಇದರಿಂದ ಹೋಟೆಲ್‌, ಗೂಡಂಗಡಿ, ದಿನಸಿ ಅಂಗಡಿಗಳು ಇತ್ಯಾದಿಗಳ ಮೇಲೂ ಪರಿಣಾಮ ಬೀರಿದೆ. ಇಂಥದೊಂದು ದೈನಸಿತನ ಇದುವರೆಗೆ ಬಂದಿರಲಿಲ್ಲ. ಸರ್ಕಾರ ಸಮಸ್ಯೆಯನ್ನು ನಿಭಾಯಿಸುವಲ್ಲಿ ವಿಫಲವಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್‌ ಆಕ್ರೋಶ ವ್ಯಕ್ತಪಡಿಸಿದರು.

ಕೆಲಸವೇ ಇಲ್ಲ: ಉಮಾನಾಥ್‌ ಕೋಟ್ಯಾನ್
ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಕೆಂಪುಕಲ್ಲು ಮತ್ತು ಮರಳು ಅನ್ನದ ಬಟ್ಟಲು ತಟ್ಟೆಯ ಹಾಗೆ. ಇದು ಈ ಭಾಗದ ಪ್ರತಿಯೊಬ್ಬರಿಗೂ ಅಗತ್ಯ. ಕೆಂಪುಕಲ್ಲು ಇಲ್ಲದೆ ಯಾವುದೇ ಕೆಲಸ ನಡೆಯುವುದಿಲ್ಲ. ಶೇ.75 ಮಂದಿ ಕಾರ್ಮಿಕರ ಮೇಲೆ ದುಷ್ಪರಿಣಾಮ ಬಿದ್ದಿದೆ ಎಂದರು.

ಧರಣಿಯಲ್ಲಿ ಬಂಟ್ವಾಳ ಶಾಸಕ ರಾಜೇಶ್‌ ನಾಯ್ಕ್, ಕಿಶೋರ್ ಕುಮಾರ್ ಬೊಟ್ಯಾಡಿ, ಮೋನಪ್ಪ ಭಂಡಾರಿ, ವಿ ಎಚ್ ಪಿ ಜಿಲ್ಲಾಧ್ಯಕ್ಷ ಎಚ್. ಕೆ. ಪುರುಷೋತ್ತಮ, ರಮೇಶ್ ಕಂಡೆಟ್ಟು, ಪ್ರೇಮಾನಂದ ಶೆಟ್ಟಿ ಮೊದಲಾದವರು ಭಾಗಿಯಾಗಿದ್ದರು.

 

 

 

 

 

 

 

 

 

 

 

error: Content is protected !!