ಮಂಗಳೂರು: “ಉದ್ಯಮೇನ ಹಿ ಕ್ರಾಂತಿಃ- ಉದ್ಯಮದಿಂದಲೇ ಕ್ರಾಂತಿ ಎಂಬ ಧ್ಯೇಯವಾಕ್ಯದೊಂದಿಗೆ ಮಂಗಳೂರು ಪ್ರೊಡಕ್ಟಿವಿಟಿ ಕೌನ್ಸಿಲ್ ಹಾಗೂ ರೋಟರಿ ಕ್ಲಬ್ ಆಫ್ ಮಂಗಳೂರು ಸೆಂಟ್ರಲ್ ಇವರ ಸಂಯುಕ್ತ ಆಶಯದಲ್ಲಿ ಕರಾವಳಿ ಎಂಎಸ್‌ಎಂಇ ಹಾಗೂ ಸ್ಟಾರ್ಟ್‌ಅಪ್ ಕಾನ್‌ಕ್ಲೇವ್ – 2025 ಅನ್ನು ಸೆಪ್ಟೆಂಬರ್ 20 ರಂದು ಶನಿವಾರ ಮಂಗಳೂರಿನ ರೆಡ್‌ಕ್ರಾಸ್ ಪೇರಣಾ ಸಭಾಭವನದಲ್ಲಿ ಆಯೋಜಿಸಲಾಗುತ್ತಿದೆ.
ಮಂಗಳವಾರ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾನ್‌ಕ್ಲೇವ್ ನಿರ್ದೇಶಕ ಸಿಎ ಎಸ್.ಎಸ್. ನಾಯಕ್ ಮಾತನಾಡಿ, “ಕರಾವಳಿ ಕರ್ನಾಟಕದ ಅನೇಕ ಉದ್ಯಮಿಗಳು ಹಾಗೂ ಸ್ಟಾರ್ಟ್‌ಅಪ್‌ಗಳು ವಿವಿಧ ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸಿ ಅಳಿಸಲಾಗದ ಕೊಡುಗೆಯನ್ನು ನೀಡಿದ್ದಾರೆ. ಈ ಕಾನ್‌ಕ್ಲೇವ್ ಅವರ ಸಾಧನೆಯನ್ನು ಗುರುತಿಸಿ ಮತ್ತಷ್ಟು ಉತ್ತೇಜಿಸಲು ವೇದಿಕೆಯಾಗಲಿದೆ,” ಎಂದು ಹೇಳಿದರು.
ಭಾರತದಲ್ಲಿ 7.34 ಕೋಟಿ ಎಂಎಸ್‌ಎಂಇಗಳು ಕಾರ್ಯನಿರ್ವಹಿಸುತ್ತಿದ್ದು, 26 ಕೋಟಿಗೂ ಹೆಚ್ಚು ಜನರಿಗೆ ಉದ್ಯೋಗ ಒದಗಿಸುತ್ತಿವೆ. ಜಿಡಿಪಿಗೆ 30% ಹಾಗೂ ಒಟ್ಟು ರಫ್ತುಗಳಿಗೆ 45% ಕೊಡುಗೆಯನ್ನು ನೀಡುತ್ತಿರುವ ಈ ವಲಯಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ದೊರೆಯುವ ಸಹಾಯಧನ, ಸಾಲ, ಸೌಲಭ್ಯಗಳ ಕುರಿತು ಸರಳ ಮಾಹಿತಿ ನೀಡುವ ಉದ್ದೇಶವೂ ಈ ಕಾನ್‌ಕ್ಲೇವ್‌ನಲ್ಲಿದೆ ಎಂದು ಅವರು ತಿಳಿಸಿದರು.
ಆರು ವಿಶೇಷ ಅಧಿವೇಶನಗಳು ನಡೆಯಲಿದ್ದು, 25 ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ಎಂಎಸ್‌ಎಂಇ ಹಾಗೂ ಸ್ಟಾರ್ಟ್‌ಅಪ್‌ಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ತುಳುನಾಡಿನ ಸಂಸ್ಕೃತಿಯ ವೈಭವವನ್ನು ಪ್ರತಿಬಿಂಬಿಸುವ ನಂದಗೋಕೂಲ ಡಾನ್ಸ್ ಕಂಪನಿ ಅವರ ನೃತ್ಯ ವೈಭವವೂ ಪ್ರಮುಖ ಆಕರ್ಷಣೆ.
ಕರ್ನಾಟಕ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್ ಮುಖ್ಯ ಪ್ರಾಯೋಜಕರಾಗಿದ್ದು, ಎಸ್‌ಬಿಐ, ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್, ಫೆಡರಲ್ ಬ್ಯಾಂಕ್, SIDBI, SVC ಬ್ಯಾಂಕ್, NMPA, MRPL, CAMPCO ಹಾಗೂ MCC ಬ್ಯಾಂಕ್ ಸಹಪ್ರಾಯೋಜಕರಾಗಿವೆ.
ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ಪ್ರೊಡಕ್ಟಿವಿಟಿ ಕೌನ್ಸಿಲ್ ಅಧ್ಯಕ್ಷ ಯು.ರಾಮ್ ರಾವ್, ಕಾರ್ಯದರ್ಶಿ ಪಿ.ರವೀಂದ್ರರಾವ್, ರೋಟರಿ ಕ್ಲಬ್‌ನ ಡಾ. ದೇವದಾಸ್ ರೈ, ರೋ. ಭಾಸ್ಕರ್ ಕಟ್ಟ, ರೋ. ವಿಕಾಸ್ ಕೋಟಿಯನ್ ಹಾಗೂ ರೋ. ಡಾ.ಎಸ್.ಎಂ. ಶಿವಪ್ರಕಾಶ್ ಉಪಸ್ಥಿತರಿದ್ದರು.