ಮಂಗಳೂರು: ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗ್ಗಡೆಯವರ ಕುಟುಂಬ ಹಾಗೂ ಅವರ ಅಧೀನದಲ್ಲಿರುವ ಸಂಸ್ಥೆಗಳು ಹಲವು ದಶಕಗಳಿಂದ ಅನೇಕ ಭೂ ಅಕ್ರಮಗಳು, ಆರ್ಥಿಕ ಅಪರಾಧಗಳು ಮತ್ತು ಕ್ರಿಮಿನಲ್ ಕೃತ್ಯಗಳನ್ನು ನಡೆಸಿಕೊಂಡು ಬರುತ್ತಿರುವ ಹಿನ್ನೆಲೆಯಲ್ಲಿ ಸಮಗ್ರ ತನಿಖೆ ತುರ್ತುವಾಗಿ ನಡೆಯಲೇಬೇಕೆಂದು ನಾಗರಿಕ ಸೇವಾ ಟ್ರಸ್ಟ್‌ನ ಸೋಮನಾಥ್ ನಾಯ್ಕ್ ಆಗ್ರಹಿಸಿದರು.
ಸತ್ಯಮೇವ ಜಯತೇ ಸಂಘಟನೆಗಳ ಒಕ್ಕೂಟ–ಕರ್ನಾಟಕ ಮತ್ತು ನಾಗರಿಕ ಸೇವಾ ಟ್ರಸ್ಟ್‌ನ ವತಿಯಿಂದ ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಮತ್ತು ಕಂದಾಯ ಸಚಿವರು ತನಿಖೆಗೆ ನಿರ್ದೇಶನ ನೀಡಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ ಈ ವಿಷಯವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ದಾಖಲೆಗಳೊಂದಿಗೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದರು.
ಆರೋಪಗಳು
1050 ಎಕರೆ ದೇವಸ್ಥಾನದ ಭೂಮಿಯನ್ನು ಕುಟುಂಬದ ಹೆಸರಿಗೆ ವರ್ಗಾವಣೆ ಮಾಡಲಾಗಿದೆ. ಸುಳ್ಳು ದಾಖಲೆ ನೀಡಿ ಕಂದಾಯ ಇಲಾಖೆಯಿಂದ ಭೂಮಿ ಪಡೆದ ಪ್ರಕರಣ ಇದಾಗಿದೆ. ಹೂದೋಟ, ಮೃಗಾಲಯಕ್ಕಾಗಿ ಪಡೆದ ಭೂಮಿಯನ್ನು ವಾಣಿಜ್ಯ ಪ್ರಯೋಜನಕ್ಕೆ ಬಳಕೆ ಮಾಡಲಾಗಿದೆ. 44 ಎಕರೆ ಡಿ.ಸಿ. ಮನ್ನಾ ಭೂಮಿ ಪಡೆದು ದಲಿತರ ಹಕ್ಕು ವಂಚನೆ ಮಾಡಲಾಗಿದೆ. ದೇವಾಲಯ ಕಾರ್ಮಿಕರಿಗೆ ಗೃಹ ಹಕ್ಕು ನಿರಾಕರಣೆ ಮಾಡಲಾಗಿದೆ. ಕಾರ್ಮಿಕರಿಗೆ PF ನೀಡಲು ನಿರಾಕರಣೆ ಮಾಡಲಾಗಿದೆ. 334 ಕೋರ್ಟ್ ಪ್ರಕರಣಗಳಲ್ಲಿ ವಾದಿ/ಪ್ರತಿವಾದಿಯಾಗಿ ಭಾಗವಹಿಸಿರುವ ದಾಖಲೆ ಇದೆ. ಶಿಕ್ಷಣ ಸಂಸ್ಥೆಗಳಲ್ಲಿ SC/ST ಅನುದಾನ ದುರುಪಯೋಗವಾಗಿದೆ. ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ, ಅತ್ಯಾಚಾರ ಮತ್ತು ಹತ್ಯೆ ಪ್ರಕರಣಗಳ ಪತ್ತೆಯಾಗಿಲ್ಲ. ಈ ಕುರಿತು “ಬಯಲಾದ ಹೆಗ್ಗಡೆ ಕರ್ಮಕಾಂಡ” ಎಂಬ 300 ಪುಟಗಳ ಪ್ರತ್ಯೇಕ ಗ್ರಂಥವನ್ನು ಪ್ರಕಟಿಸಿರುವುದಾಗಿ ಸೋಮನಾಥ್ ನಾಯ್ಕ್ ಹೇಳಿದರು.
ಆಗ್ರಹಗಳು:
ಭೂ ಅಕ್ರಮ ಹಾಗೂ ದೌರ್ಜನ್ಯ ಪ್ರಕರಣಗಳಿಗೆ ವಿಶೇಷ ತನಿಖಾ ತಂಡ (SIT) ರಚನೆ ನಡೆಸಬೇಕು. ಧರ್ಮಸ್ಥಳದ ಮಂಜುನಾಥಸ್ವಾಮಿ ದೇವಾಲಯವನ್ನು ಕಾನೂನುಬದ್ಧವಾಗಿ ನೋಂದಣಿ ಮಾಡಲು ಜಿಲ್ಲಾಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು. ದೇವಾಲಯದ ಲೆಕ್ಕಪತ್ರ ಮತ್ತು ಆಸ್ತಿಗಳನ್ನು ಬಹಿರಂಗಗೊಳಿಸಬೇಕು ಎಂದವರು ಪತ್ರಿಕಾಗೋಷ್ಠಿಯಲ್ಲಿ ಆಗ್ರಗಹಿಸಲಾಯಿತು.
“ಅನೇಕ ಜನರ ಜೀವ ಹಾಳಾಗಿರುವುದರ ಹಿಂದೆ ಇಂತಹ ಅಕ್ರಮಗಳು ಅಡಗಿವೆ. ಈಗಾದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕ್ರಮಕೈಗೊಳ್ಳಬೇಕು” ಎಂದು ಅವರು ಪುನರುಚ್ಛರಿಸಿದರು.
ಸಾಹಿತಿ ಲಕ್ಷ್ಮೀಶ್ ತೋಳ್ಪಾಡಿ, ಪ್ರೊ.ನರೇಂದ್ರ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.