ಮಂಗಳೂರು: ಬನ್ನಂಜೆ ಗೋವಿಂದಾಚಾರ್ಯರ ಜನ್ಮದ 90ನೇ ವರ್ಷದ ಅಂಗವಾಗಿ ‘ವಿಶ್ವ ಬನ್ನಂಜೆ 90ರ ನಮನ’ ಕಾರ್ಯಕ್ರಮವನ್ನು ಸೆಪ್ಟೆಂಬರ್ 21ರಂದು ಮಂಗಳೂರಿನ ಶ್ರೀರಾಮಕೃಷ್ಣ ಮಠದ ಆವರಣದಲ್ಲಿ ಪೂರ್ಣ ದಿನದ ಕಾರ್ಯಕ್ರಮದೊಂದಿಗೆ ನಡೆಸಲಾಗುವುದು ಎಂದು ತುಳುನಾಡು ಶಿಕ್ಷಣ ಸಂಸ್ಥೆ ಹಾಗೂ ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರೊ. ಎಂ.ಬಿ. ಪುರಾಣಿಕ್ ತಿಳಿಸಿದ್ದಾರೆ.
ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, “ಬನ್ನಂಜೆಯವರು ಬದುಕಿದ್ದರೆ ಈಗ 90 ವರ್ಷ ಪೂರೈಸುತ್ತಿದ್ದರು. ಆ ನೆನಪಿಗಾಗಿ ಕರ್ನಾಟಕ ಮಾತ್ರವಲ್ಲದೆ ಹೃಷಿಕೇಶ ಮತ್ತು ಅಮೆರಿಕ ಸೇರಿದಂತೆ ಹಲವು ಕಡೆಗಳಲ್ಲಿ ಈ ನಮನ ಕಾರ್ಯಕ್ರಮಗಳು ನಡೆಯಲಿವೆ. ಇದರ ಪರಿಕಲ್ಪನೆ ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ (ರಿ.) ಬೆಂಗಳೂರು ಇವರದು. ಸ್ಥಳೀಯವಾಗಿ ಮಂಗಳೂರಿನ ಅಭಿಮಾನಿಗಳೇ ಇದರ ಮುಖ್ಯ ಆಯೋಜಕರು” ಎಂದರು.
ಅವರು ಮುಂದುವರೆದು, “ಈಗಾಗಲೇ ಉಡುಪಿಯಲ್ಲಿ ಆಗಸ್ಟ್ 3ರಂದು ಬನ್ನಂಜೆಯವರ ಜನ್ಮದಿನದಂದು ಕಾರ್ಯಕ್ರಮ ಉದ್ಘಾಟನೆಗೊಂಡಿದೆ. ವರ್ಷ ಪೂರ್ತಿ ತಿಂಗಳಿಗೆ ಎರಡು ಕಾರ್ಯಕ್ರಮಗಳನ್ನು ಆಯೋಜಿಸುವ ಯೋಜನೆಯಿದ್ದು, ಅದರ ಮುಂದಿನ ಹಂತ ಮಂಗಳೂರಿನಲ್ಲಿ ನಡೆಯಲಿದೆ. ಕಾರ್ಯಕ್ರಮಕ್ಕೆ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮತ್ತು ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರ ಆಶೀರ್ವಾದವಿದೆ” ಎಂದು ತಿಳಿಸಿದರು.
ಈ ಕಾರ್ಯಕ್ರಮದ ಗೌರವಾಧ್ಯಕ್ಷರು ಡಾ. ಎಂ.ಬಿ. ಪುರಾಣಿಕ್ ಹಾಗೂ ಕಾರ್ಯಾಧ್ಯಕ್ಷರು ಸುಧಾಕರ ರಾವ್ ಪೇಜಾವರ ಆಗಿದ್ದಾರೆ. ಸಮಿತಿಯಲ್ಲಿ ಹಲವಾರು ಮಹನೀಯರು ಪಾಲ್ಗೊಂಡಿದ್ದು, ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸುತ್ತಿದ್ದಾರೆ. ಸೆಪ್ಟೆಂಬರ್ 5ರಂದು ಮಂಗಳೂರಿನ ಶ್ರೀರಾಮಕೃಷ್ಣ ಮಠದಲ್ಲಿ ಶ್ರೀ ಜಿತಕಾಮಾನಂದ ಸ್ವಾಮೀಜಿಯವರ ಅನುಗ್ರಹದಲ್ಲಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾಗಿದೆ. ಸೆಪ್ಟೆಂಬರ್ 21ರಂದು ನಡೆಯಲಿರುವ ಈ ಮಹತ್ವದ ಕಾರ್ಯಕ್ರಮಕ್ಕೆ ಎಲ್ಲರಿಗೂ ಮುಕ್ತ ಸ್ವಾಗತವಿದೆ ಎಂದು ಆಯೋಜಕರು ಹೇಳಿದರು.
ಗೋಷ್ಠಿಯಲ್ಲಿ ಶ್ರೀಷ ಕುಮಾರ್, ಸುಧಾಕರ ರಾವ್ ಪೇಜಾವರ ಮತ್ತಿತರರಿದ್ದರು.
ಕಾರ್ಯಕ್ರಮದ ವಿವರಗಳು
ಅಧ್ಯಕ್ಷತೆ: ಶ್ರೀ ಜಿತಕಾಮಾನಂದ ಸ್ವಾಮೀಜಿ
ಉದ್ಘಾಟನೆ: ಶ್ರೀ ವೇದವ್ಯಾಸ ಆಚಾರ್ಯ ಶ್ರೀಶಾನಂದ ಹಾಗೂ ಕರ್ನಾಟಕ ಹೈಕೋರ್ಟ್‌ನ ಗೌರವಾನ್ವಿತ ನ್ಯಾಯಮೂರ್ತಿಗಳು
ಅತಿಥಿಗಳು: ಶ್ರೀ ಸೇತುರಾಮ್ ಸೇರಿದಂತೆ ಅನೇಕ ಗಣ್ಯರು
ಗೋಷ್ಠಿಗಳು: ಬನ್ನಂಜೆಯವರ ಕುರಿತು ಶಿಷ್ಯರು ಮತ್ತು ಸ್ಥಳೀಯ ವಿದ್ವಾಂಸರ ಮಾತುಕತೆ
ಸಮಾರೋಪ: ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರ ಆಶೀರ್ವಚನ
ಸಂಗೀತ: ಶ್ರೀ ವಿದ್ಯಾಭೂಷಣರಿಂದ ಬನ್ನಂಜೆಯವರ ಹಾಡುಗಳು, ಕವಿತಾ ಉಡುಪ ಮತ್ತು ಸುಮಾ ಶಾಸ್ತ್ರಿಯಿಂದ ಕವಿತೆಗಳ ಗಾಯನ