ʻಸೆ.16ರಂದು ಮಂಗಳೂರಿಗೆ ಬರಲಿದೆ ಅಬ್ಬಕ್ಕ ರಥ ಯಾತ್ರೆʼ

ಮಂಗಳೂರು: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕರ್ನಾಟಕ ದಕ್ಷಿಣ ಪ್ರಾಂತದ ವತಿಯಿಂದ ನಡೆಯುತ್ತಿರುವ ರಾಣಿ ಅಬ್ಬಕ್ಕ ರಥಯಾತ್ರೆಯ ಸಮಾರೋಪ ಸಮಾರಂಭ ಹಾಗೂ ಬೃಹತ್ ಶೋಭಾಯಾತ್ರೆ ಕುರಿತಂತೆ ಇಂದು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಯಿತು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಬಿವಿಪಿ ಮಂಗಳೂರು ವಿಭಾಗದ ಪ್ರಮುಖರಾದ ಕೇಶವ ಬಂಗೇರ ಅವರು, ರಾಣಿ ಅಬ್ಬಕ್ಕಳ 500ನೇ ಜನ್ಮಜಯಂತಿಯ ಅಂಗವಾಗಿ ಸೆಪ್ಟೆಂಬರ್ 6ರಿಂದ ಆರಂಭವಾದ ರಥಯಾತ್ರೆ ರಾಜ್ಯಾದ್ಯಂತ ಭಾರಿ ಯಶಸ್ಸು ಕಂಡು, ಸೆಪ್ಟೆಂಬರ್ 16ರಂದು ಮಂಗಳೂರಿನಲ್ಲಿ ಭವ್ಯ ಅಂತಿಮ ಹಂತ ತಲುಪಲಿದೆ ಎಂದು ತಿಳಿಸಿದರು.

ಸೆಪ್ಟೆಂಬರ್ 15ರಂದು ಬೆಳಿಗ್ಗೆ 10 ಗಂಟೆಗೆ ಉಜಿರೆ SDM ಕಾಲೇಜಿನಿಂದ ಮೊದಲ ರಥ ಆರಂಭವಾಗಿ, ಮಧ್ಯಾಹ್ನ 2 ಗಂಟೆಗೆ ಪುತ್ತೂರು ವಿವೇಕಾನಂದ ಕಾಲೇಜು, ಸಂಜೆ 6 ಗಂಟೆಗೆ ಕಲ್ಲಡ್ಕ ತಲುಪಲಿದೆ. ಇದೇ ದಿನ ಸಂಜೆ 6 ಗಂಟೆಗೆ ಸುಳ್ಯದಿಂದ ಎರಡನೇ ರಥ ಪ್ರಾರಂಭವಾಗಲಿದೆ. ಸೆಪ್ಟೆಂಬರ್ 16ರಂದು ಬೆಳಿಗ್ಗೆ 9.30ಕ್ಕೆ ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಕ್ರೀಡಾಂಗಣದಿಂದ ಜ್ಯೋತಿ ಸರ್ಕಲ್ ಮಾರ್ಗವಾಗಿ ಹಂಪನಕಟ್ಟೆಯವರೆಗೆ ಬೃಹತ್ ಶೋಭಾಯಾತ್ರೆ ನಡೆಯಲಿದೆ ಎಂದರು.

ಈ ಶೋಭಾಯಾತ್ರೆಯಲ್ಲಿ ಸುಮಾರು 3,000ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಬೆಳಿಗ್ಗೆ 11.30ಕ್ಕೆ ಪುರಭವನದಲ್ಲಿ ಸಮಾರೋಪ ಸಮಾರಂಭ ಜರುಗಲಿದೆ. ಸಂಜೆ 5.30ಕ್ಕೆ ರಥವು ರಾಣಿ ಅಬ್ಬಕ್ಕಳ ಕರ್ಮಭೂಮಿ ಉಳ್ಳಾಲ ತಲುಪಿ, ನಂತರ ಮಾಡೂರು ಅಯ್ಯಪ್ಪ ಮಂದಿರದಿಂದ ಬೀರಿ ಜಂಕ್ಷನ್ ಗಣೇಶ ಮಂದಿರದವರೆಗೆ ಸಾರ್ವಜನಿಕ ಸಭೆ ಹಾಗೂ ರಥ ವಿಸರ್ಜನೆ ನಡೆಯಲಿದೆ ಎಂದರು.

ಕಾರ್ಯಕ್ರಮದಲ್ಲಿ ಜನಸಾಮಾನ್ಯರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಅವರು ಪತ್ರಿಕಾಗೋಷ್ಠಿಯಲ್ಲಿ ಕೋರಿದರು.

ಪತ್ರಿಕಾಗೋಷ್ಠಿಯಲ್ಲಿ ಹಲವರಿದ್ದರು.

error: Content is protected !!