ಉಳ್ಳಾಲ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಪಲ್ಟಿ – ಈಜಿ ಪಾರಾದ 13 ಮೀನುಗಾರರು, 1 ಕೋಟಿಗೂ ಅಧಿಕ ನಷ್ಟ

ಉಳ್ಳಾಲ: ಇಂದು ಮುಂಜಾನೆ ಉಳ್ಳಾಲ ಸಮುದ್ರ ಕಿನಾರೆಯಲ್ಲಿ ಸಂಭವಿಸಿದ ಭಯಾನಕ ದುರಂತದಲ್ಲಿ ಮೀನುಗಾರಿಕಾ ಬೋಟ್ ಒಂದು ಕಲ್ಲು ಬಂಡೆಗಳಿಗೆ ಬಡಿದು ಪಲ್ಟಿಯಾಗಿದೆ. ಅದೃಷ್ಟವಶಾತ್ ಚಾಲಕ ಸೇರಿ ಬೋಟ್‌ನಲ್ಲಿ ಇದ್ದ ಎಲ್ಲಾ ಹದಿಮೂರು ಮಂದಿ ಮೀನುಗಾರರು ಸಮಯಕ್ಕೆ ತಕ್ಕಂತೆ ಈಜಿಕೊಂಡು ದಡ ಸೇರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.‌ ಆದರೆ ಬೋಟ್‌ ಉಂಟಾದ ಹಾನಿಯಿಂದ ಬರೋಬ್ಬರಿ 1 ಕೋಟಿಗೂ ಹೆಚ್ಚು ಹಣ ನಷ್ಟ ಉಂಟಾಗಿದೆ.

ದುರಂತದ ಕ್ಷಣಗಳು

ಅಶ್ಫಾಕ್ ಎಂಬವರ ಮಾಲಕತ್ವದ ʻಬುರಖ್ʼ ಹೆಸರಿನ ಮೀನುಗಾರಿಕಾ ಬೋಟ್ ಮಂಗಳೂರಿನ ಧಕ್ಕೆಯಿಂದ ಸುಮಾರು ಹದಿಮೂರು ಮಂದಿಯನ್ನು ಹೊತ್ತು ಇಂದು ಬೆಳಗಿನ 2.30ರ ಹೊತ್ತಿಗೆ ಸಮುದ್ರಕ್ಕೆ ಹೊರಟಿತ್ತು. ಆದರೆ ಉಳ್ಳಾಲ ಸೀಗ್ರೌಂಡ್ ಬಳಿ ಬೋಟ್ ಸಾಗುತ್ತಿದ್ದಾಗ ಹಠಾತ್ತನೆ ಇಂಜಿನ್ ಆಫ್ ಆಯಿತು. ನಿಯಂತ್ರಣ ಕಳೆದುಕೊಂಡ ಬೋಟ್ ಸಮುದ್ರ ಅಲೆಗಳ ಒತ್ತಡಕ್ಕೆ ಒಳಗಾಗಿ, ತೀರ ಪ್ರದೇಶದಲ್ಲಿ ಕಡಲ್ಕೊರೆತ ತಡೆಗಾಗಿ ಹಾಕಲಾಗಿದ್ದ ಕಲ್ಲು ಬಂಡೆಗಳಿಗೆ ಬಡಿದು ಕ್ಷಣಾರ್ಧದಲ್ಲಿ ಪಲ್ಟಿಯಾಯಿತು.

ಮೀನುಗಾರರ ಸಾಹಸ

ಅಪಘಾತ ಸಂಭವಿಸಿದ ಕ್ಷಣಗಳಲ್ಲಿ ಭೀತಿಗೊಳಗಾದ ಮೀನುಗಾರರು ಧೃತಿಗೆಡದೆ ತಮ್ಮ ಜೀವ ಉಳಿಸಿಕೊಳ್ಳಲು ಧೈರ್ಯದಿಂದ ನೀರಿಗೆ ಹಾರಿದರು. ಸಕಾಲದಲ್ಲಿ ಈಜು ಸಾಮರ್ಥ್ಯ ತೋರಿದ ಕಾರಣ ಎಲ್ಲರೂ ಸುರಕ್ಷಿತವಾಗಿ ತೀರ ಸೇರಿದರು. ಯಾವುದೇ ಜೀವಹಾನಿ ಸಂಭವಿಸದಿರುವುದು ಸಮುದಾಯಕ್ಕೆ ನೆಮ್ಮದಿಯ ವಿಷಯವಾಗಿದೆ. ಆದರೆ, ಬೋಟ್ ಸಂಪೂರ್ಣ ಹಾನಿಗೊಳಗಾದರೆಂದರೆ ಮೀನಿನ ಬಲೆ, ಇಂಜಿನ್ ಮತ್ತು ಇತರೆ ಮೀನುಗಾರಿಕಾ ಉಪಕರಣಗಳೂ ಸೇರಿ ಸುಮಾರು ಒಂದೂವರೆ ಕೋಟಿ ರೂಪಾಯಿ ಮೌಲ್ಯದ ನಷ್ಟ ಸಂಭವಿಸಿದೆ ಎಂದು ಬೋಟ್ ವ್ಯವಸ್ಥಾಪಕರಾದ ಖಲೀಲ್ ತಿಳಿಸಿದ್ದಾರೆ.

ಘಟನೆಯ ಮಾಹಿತಿ ಲಭ್ಯವಾಗುತ್ತಿದ್ದಂತೆ ಉಳ್ಳಾಲ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ನಿಖರ ಕಾರಣ ಹಾಗೂ ತಾಂತ್ರಿಕ ದೋಷದ ಹಿನ್ನೆಲೆ ಕುರಿತು ಪ್ರಾಥಮಿಕ ತನಿಖೆ ಆರಂಭಿಸಲಾಗಿದೆ.

error: Content is protected !!