ಬೆಂಗಳೂರು: ಹೆಚ್ಎಎಲ್ ಮುಖ್ಯ ದ್ವಾರದ ಬಳಿ ಚಲಿಸುತ್ತಿದ್ದ ಬಿಎಂಟಿಸಿ ಬಸ್ಸೊಂದರಲ್ಲಿ ಏಕಾಏಕಿ ಭೀಕರ ಬೆಂಕಿ ಕಾಣಿಸಿಕೊಂಡು, ಬಸ್ಸು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿರುವ ಘಟನೆ ನಡೆದಿದೆ. ಚಾಲಕನ ತ್ವರಿತ ಕಾರ್ಯವಿಧಾನದಿಂದಾಗಿ ಬಸ್ಸಿನಲ್ಲಿದ್ದ ಎಲ್ಲಾ 75 ಪ್ರಯಾಣಿಕರು ಸುರಕ್ಷಿತವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಘಟನೆ ಬೆಳಗಿನ ಜಾವ ಸುಮಾರು 5:10 ಗಂಟೆಗೆ ನಡೆದಿದೆ. ಮೆಜೆಸ್ಟಿಕ್ನಿಂದ ಕಾಡುಗೋಡಿಗೆ ತೆರಳುತ್ತಿದ್ದ (KA57 F 4568) ನಂಬರ್ ಬಸ್ಸಿನ ಎಂಜಿನ್ನಿಂದ ಹೊಗೆ ಬರಲು ಪ್ರಾರಂಭವಾಯಿತು. ಇದನ್ನು ಗಮನಿಸಿದ ಚಾಲಕ ಮತ್ತು ನಿರ್ವಾಹಕರು ತಕ್ಷಣವೇ ಬಸ್ಸನ್ನು ನಿಲ್ಲಿಸಿ, ಎಲ್ಲಾ ಪ್ರಯಾಣಿಕರನ್ನು ಹತೋಟಿಯಿಂದ ಇಳಿಸಿದರು. ಅನಂತರ ಬಸ್ಸಿನಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡು ಕೆಲವೇ ನಿಮಿಷಗಳಲ್ಲಿ ಸಂಪೂರ್ಣ ವಾಹನವನ್ನು ಭಸ್ಮ ಮಾಡಿದೆ.
ಘಟನಾ ಸ್ಥಳಕ್ಕೆ ಹೆಚ್ಎಎಲ್ ಅಗ್ನಿಶಾಮಕ ದಳ ಬಂದು ಬೆಂಕಿಯನ್ನು ನಂದಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಹೆಚ್ಎಎಲ್ ಪೊಲೀಸ್ ಠಾಣೆ ವಿಚಾರಣೆ ನಡೆಸಿದೆ. ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಳ್ಳಲು ಕಾರಣವನ್ನು ಪತ್ತೆಹಚ್ಚಲು ಬಿಎಂಟಿಸಿ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.