ನವದೆಹಲಿ: ಹೊಸ ಕಾನೂನಿನ ಸಾಂವಿಧಾನಿಕತೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ವಕ್ಫ್ (ತಿದ್ದುಪಡಿ) ಕಾಯ್ದೆ, 2025ರ ಕೆಲ ವಿವಾದಾತ್ಮಕ ನಿಬಂಧನೆಗಳ ಜಾರಿಗೆ ಸೋಮವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಪ್ರಮುಖ ತೀರ್ಮಾನಗಳು
ವಕ್ಫ್ ರಚಿಸಲು ಕನಿಷ್ಠ ಐದು ವರ್ಷ ಇಸ್ಲಾಂ ಧರ್ಮ ಅನುಸರಣೆ ಕಡ್ಡಾಯ ಎಂಬ ನಿಬಂಧನೆಯನ್ನು ತಡೆಹಿಡಿಯಲಾಗಿದೆ. ರಾಜ್ಯ ಸರ್ಕಾರಗಳು ಸ್ಪಷ್ಟ ಮಾರ್ಗಸೂಚಿ ರೂಪಿಸುವವರೆಗೆ ಈ ನಿಯಮ ಅಮಾನತುಗೊಂಡಂತಾಗಿದೆ. ವಕ್ಫ್ ಆಸ್ತಿ ಸರ್ಕಾರಿ ಭೂಮಿ ಅತಿಕ್ರಮಿಸಿದೆ ಎಂಬುದನ್ನು ಸರ್ಕಾರದ ಅಧಿಕಾರಿಯೇ ಏಕಪಕ್ಷೀಯವಾಗಿ ನಿರ್ಧರಿಸುವ ಅಧಿಕಾರಕ್ಕೂ ತಡೆ ನೀಡಲಾಗಿದೆ. ಇದು “ಅಧಿಕಾರಗಳ ಪ್ರತ್ಯೇಕತೆ” ತತ್ವಕ್ಕೆ ವಿರುದ್ಧ ಎಂದು ಪೀಠ ಸ್ಪಷ್ಟಪಡಿಸಿದೆ. ವಿವಾದಿತ ಆಸ್ತಿಗಳ ಕುರಿತು ಮೂರನೇ ವ್ಯಕ್ತಿಯ ಹಕ್ಕುಗಳನ್ನು ಸೃಷ್ಟಿಸುವುದನ್ನು ನ್ಯಾಯಾಲಯ ನಿರ್ಬಂಧಿಸಿದೆ.
ವಕ್ಫ್ ಮಂಡಳಿಗಳಲ್ಲಿ ಮುಸ್ಲಿಮೇತರ ಸದಸ್ಯರ ನಾಮನಿರ್ದೇಶನಕ್ಕೆ ಅವಕಾಶ ನೀಡುವ ನಿಯಮಕ್ಕೆ ತಡೆ ನೀಡಿಲ್ಲ. ಆದರೆ, ಕೇಂದ್ರ ಮಂಡಳಿಯಲ್ಲಿ ಗರಿಷ್ಠ 4 ಮುಸ್ಲಿಮೇತರರು, ರಾಜ್ಯ ಮಂಡಳಿಗಳಲ್ಲಿ ಗರಿಷ್ಠ 3 ಮುಸ್ಲಿಮೇತರರು ಮಾತ್ರ ಇರಬೇಕು ಎಂದು ಸೂಚಿಸಲಾಗಿದೆ. ವಕ್ಫ್ ನೋಂದಣಿಯ ನಿಯಮವನ್ನು ನ್ಯಾಯಾಲಯ ಸ್ಥಗಿತಗೊಳಿಸಿಲ್ಲ. ಆದರೆ ನೋಂದಣಿಗೆ ನೀಡಿದ್ದ ಗಡುವನ್ನು ವಿಸ್ತರಿಸಲಾಗಿದೆ.
ಹಿನ್ನೆಲೆ
ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಹಾಗೂ ನ್ಯಾಯಮೂರ್ತಿ ಎ.ಜಿ. ಮಸಿಹ್ ಅವರನ್ನೊಳಗೊಂಡ ಪೀಠವು ಅರ್ಜಿದಾರರು ಹಾಗೂ ಕೇಂದ್ರ ಸರ್ಕಾರದ ವಾದಗಳನ್ನು ಆಲಿಸಿ ಮೇ 22ರಂದು ವಿಚಾರಣೆ ಮುಗಿಸಿತ್ತು. ಆದರೆ ಅಸಾದುದ್ದೀನ್ ಓವೈಸಿ (AIMIM) ಮತ್ತು ಕಾಂಗ್ರೆಸ್ ಸಂಸದ ಮೊಹಮ್ಮದ್ ಜಾವೇದ್ ಸೇರಿ ಹಲವಾರು ಮಂದಿ ಈ ಕಾಯ್ದೆಯ ಸಂವಿಧಾನಿಕತೆಯನ್ನು ಪ್ರಶ್ನಿಸಿದ್ದರು. ಅರ್ಜಿದಾರರ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ಹಾಗೂ ರಾಜೀವ್ ಧವನ್ ವಾದ ಮಂಡಿಸಿದರು.
ಕಪಿಲ್ ಸಿಬಲ್ ತಿದ್ದುಪಡಿಯನ್ನು “ಅಸಂವಿಧಾನಿಕ ಮತ್ತು ಅನಿಯಂತ್ರಿತ” ಎಂದು ವಾದಿಸಿದರು. ರಾಜೀವ್ ಧವನ್, ವಕ್ಫ್ ಮುಸ್ಲಿಂ ಸಮುದಾಯದಲ್ಲಿ ಧಾರ್ಮಿಕ-ಸಾಮಾಜಿಕ ಮಹತ್ವ ಹೊಂದಿದೆ ಎಂದು ಒತ್ತಿ ಹೇಳಿದರು. ಇನ್ನೊಂದೆಡೆ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ವಕ್ಫ್ ಪರಿಕಲ್ಪನೆ ಧಾರ್ಮಿಕಕ್ಕಿಂತ ಆಡಳಿತಾತ್ಮಕ ಸ್ವರೂಪದದ್ದೇ ಎಂದು ವಾದಿಸಿದರು.
ವಕ್ಫ್ (ತಿದ್ದುಪಡಿ) ಕಾಯ್ದೆ 2025, ವಕ್ಫ್ ಕಾಯ್ದೆ 1995ಕ್ಕೆ ತಿದ್ದುಪಡಿ ತರಲಾಗಿದ್ದು, ಏಪ್ರಿಲ್ 5ರಂದು ರಾಷ್ಟ್ರಪತಿಗಳ ಒಪ್ಪಿಗೆ ಪಡೆದು ಜಾರಿಯಾಯಿತು. ಇದರ ಅಡಿಯಲ್ಲಿ ವಕ್ಫ್ ಆಸ್ತಿಗಳ ನಿರ್ವಹಣೆಗೆ ಪಾರದರ್ಶಕತೆ ತರಲು ಸರ್ಕಾರ ಉದ್ದೇಶಿಸಿತ್ತು.