ತೆಲಂಗಾಣ: ಹನುಮಕೊಂಡದ ಖಾಸಗಿ ಶಾಲೆಯ ಆಟದ ಮೈದಾನದಲ್ಲಿ ಏಕಾಏಕಿ ಕುಸಿದು ಬಿದ್ದು ಹತ್ತನೇ ತರಗತಿ ವಿದ್ಯಾರ್ಥಿಯೋರ್ವ ಮೃತಪಟ್ಟಿರುವ ಘಟನೆ ನಡೆದಿದೆ.
ಜಯಂತ್ (15) ಮೃತ ವಿದ್ಯಾರ್ಥಿ.
ವಿದ್ಯಾರ್ಥಿಗಳು ಮೈದಾನದಲ್ಲಿ ಆಟವಾಡುತ್ತಿದ್ದ ವೇಳೆ ಜಯಂತ್ ಏಕಾಏಕಿ ಕುಸಿದು ಬಿದ್ದಿದ್ದಾನೆ. ಈ ಕೂಡಲೇ ವಿದ್ಯಾರ್ಥಿಯ ಮೂಗು ಮತ್ತು ಕಿವಿಯಿಂದ ರಕ್ತ ಸೋರಿಕೆಯಾಗಿದ್ದು, ಆಸ್ಪತ್ರೆಗೆ ದಾಖಲಿಸಿದರೂ ಆತನನ್ನು ಉಳಿಸಿಕೊಳ್ಳಲು ಸಾಧ್ಯವಾಗದೆ ಕೊನೆಯುಸಿರೆಳೆದಿದ್ದ ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಯ ಪೋಷಕರು ಶಿಕ್ಷಕರ ಮೇಲೆ ತೀವ್ರ ಆರೋಪಗಳನ್ನು ಹೊರಿಸಿದ್ದು, ಶಿಕ್ಷಕರು ನನ್ನ ಮಗನನ್ನು ಹೊಡೆದಿದ್ದರು, ಅದರಿಂದಲೇ ಅವನು ಮೃತಪಟ್ಟಿದ್ದಾನೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಆರೋಪಗಳಿಗೆ ಶಾಲಾ ಆಡಳಿತವು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದು, ಘಟನೆ ಸಂಭವಿಸಿದ ನಿಖರ ಕಾರಣಗಳನ್ನು ಮರಣೋತ್ತರ ಪರೀಕ್ಷೆಯಿಂದ ತಿಳಿಯಬೇಕಿದೆ. ವರದಿ ಬಂದ ನಂತರ ಮುಂದಿನ ತನಿಖೆ ಕೈಗೆತ್ತಿಕೊಳ್ಳುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.