ಮಂಗಳೂರು: ನಗರದ ಕೈಗಾರಿಕಾ ವಲಯ ಬೈಕಂಪಾಡಿಯಲ್ಲಿರುವ ಪರ್ಫ್ಯೂಮ್(ಸುಗಂಧ ದ್ರವ್ಯ) ಕಂಪೆನಿ AROMAZEN ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಲ್ಲಿ ಇಂದು ಮುಂಜಾನೆ ಸಂಭವಿಸಿದ ಬೆಂಕಿ ದುರಂತದಿಂದ ಬರೋಬ್ಬರಿ ನಾಲ್ಕು ಕೋಟಿ ನಷ್ಟ ಉಂಟಾಗಿದೆ.
ಘಟನೆ ಗಮನಿಸಿದ ಮಂಗಳೂರು ಕೆಮಿಕಲ್ ಫರ್ಟಿಲೈಸರ್ಸ್ (ಎಂ.ಸಿ.ಎಫ್) ಸಂಸ್ಥೆಯ ಸಿಬ್ಬಂದಿ ತಕ್ಷಣವೇ ಅಗ್ನಿಶಾಮಕ ದಳಕ್ಕೆ ಸುದ್ದಿ ನೀಡಿದರು. ಕೇವಲ ಕೆಲವೇ ನಿಮಿಷಗಳಲ್ಲಿ ಕದ್ರಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಹಲವು ಗಂಟೆಗಳ ಹೋರಾಟದ ನಂತರ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು.
ಮೂಲ ಮಾಹಿತಿಯ ಪ್ರಕಾರ, ಘಟನೆಯ ಮೂಲ ಕಾರಣ ಶಾರ್ಟ್ ಸರ್ಕ್ಯೂಟ್ ಆಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಸಂಸ್ಥೆಯೊಳಗೆ ಸೋಪ್ ಮತ್ತು ಪರ್ಫ್ಯೂಮ್ ತಯಾರಿಕೆಗೆ ಬಳಸುವ ಲಿಕ್ವಿಡ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗಿದ್ದವು. ಈ ಕಾರಣದಿಂದ ಬೆಂಕಿ ತೀವ್ರವಾಗಿ ವ್ಯಾಪಿಸಿ ನಂದಿಸಲು ಅಡಚಣೆಯುಂಟಾಯಿತು. ಆದರೂ ಹರಸಾಹಸ ನಡೆಸಿ ಅಗ್ನಿಶಾಮಕ ದಳದವರು ಬೆಂಕಿಯನ್ನು ನಿಯಂತ್ರಿಸಿದರು.
ಸುಮಾರು ನಾಲ್ಕು ಕೋಟಿ ನಷ್ಟ
ಘಟನೆಯ ಪರಿಣಾಮವಾಗಿ ಸಂಸ್ಥೆಗೆ ಭಾರೀ ಆರ್ಥಿಕ ಹಾನಿಯಾಗಿದ್ದು, ಸುಮಾರು 4 ಕೋಟಿ ರೂಪಾಯಿ ನಷ್ಟ ಉಂಟಾಗಿರಬಹುದೆಂದು ಪ್ರಾಥಮಿಕ ಅಂದಾಜು ಮಾಡಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿಯನ್ನು ಸಂಗ್ರಹಿಸಿದ್ದು, ತನಿಖೆ ಕೈಗೊಂಡಿದ್ದಾರೆ.