ತಾಯಿಯನ್ನು ನಿಂದಿಸಿದಕ್ಕೆ ಸ್ನೇಹಿತರಿಂದಲೇ ಹ*ತ್ಯೆಯಾದ ರೌಡಿಶೀಟರ್‌ !

ಬೆಂಗಳೂರು: ಮದ್ಯದ ಅಮಲಿನಲ್ಲಿ ತಾಯಿ ಬಗ್ಗೆ ಅಶ್ಲೀಲವಾಗಿ ನಿಂದಿಸಿದ ರೌಡಿಶೀಟರ್‌ನನ್ನು ಸ್ನೇಹಿತರೇ ಹತ್ಯೆಗೈದಿರುವ ಘಟನೆ ಬ್ಯಾಟರಾಯನಪುರ ಠಾಣೆ ವ್ಯಾಪ್ತಿಯ ಮೈಸೂರು ರಸ್ತೆಯ ಬಾಪೂಜಿನಗರದಲ್ಲಿ ಭಾನುವಾರ(ಸೆ.7) ಮಧ್ಯರಾತ್ರಿ ಘಟನೆ ನಡೆದಿದೆ.

ಬಾಪೂಜಿ ನಗರ ನಿವಾಸಿ ಕೌಶಿಕ್‌ ಅಲಿಯಾಸ್‌ ಕರಿಯಾ (26) ಮೃತ ವ್ಯಕ್ತಿ. ಆರೋಪಿ ಚಂದನ್‌ ಹಾಗೂ ಮನೋಹರ್‌ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಕೋಲಾರ ಮೂಲದ ಕೌಶಿಕ್‌ ಬ್ಯಾಟರಾಯನಪುರ ಪೊಲೀಸ್‌ ಠಾಣೆಯ ರೌಡಿಶೀಟರ್‌ ಆಗಿದ್ದ. 2020ರಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ. ಬಳಿಕ ಜಾಮೀನು ಪಡೆದು ಬಂದು ಕ್ಯಾಬ್‌ ಓಡಿಸುತ್ತಿದ್ದ. ಭಾನುವಾರ ತಡರಾತ್ರಿ 1.30ರ ಸಮಯದಲ್ಲಿ ತನ್ನ ಇಬ್ಬರು ಸ್ನೇಹಿತರಾದ ಚಂದನ್‌ ಮತ್ತು ಮನೋಹರ್‌ ಜತೆ ಮದ್ಯ ಸೇವಿಸುತ್ತಿದ್ದ. ಈ ವೇಳೆ ಕೌಶಿಕ್‌, ಆರೋಪಿಗಳ ತಾಯಿಯಂದಿರ ಬಗ್ಗೆ ಅಶ್ಲೀಲವಾಗಿ ನಿಂದಿಸಿದ್ದಾನೆ. ಅದರಿಂದ ಆಕ್ರೋಶಗೊಂಡ ಆರೋಪಿಗಳು ಬಿಯರ್‌ ಬಾಟಲಿನಿಂದ ಹಲ್ಲೆ ನಡೆಸಿ, ನಂತರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೌಶಿಕ್‌ನನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದರು.

ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!