ಮಡಂತ್ಯಾರು: ಬೆಳಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದ ಆರ್ಥಿಕ ಅವ್ಯವಹಾರ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಬ್ಯಾಂಕಿನ ಮಾಜಿ ಸಿಬ್ಬಂದಿ ಸದಾಶಿವ ಯಾನೆ ಸುಜಿತ್ ಎಂಬಾತನನ್ನು ಧರ್ಮಸ್ಥಳ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮಂಗಳೂರಿನ ಪಡೀಲ್‌ನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಧರ್ಮಸ್ಥಳ ಎಸ್‌ಐ ಸಮರ್ಥ್ ಆರ್. ಗಾಣಿಗೇರ ನೇತೃತ್ವದ ತಂಡ ಖಚಿತ ಮಾಹಿತಿ ಮೇರೆಗೆ ಸೆ. 5ರಂದು ವಶಕ್ಕೆ ಪಡೆದಿತ್ತು. ಸೆ. 6ರಂದು ಸಂಜೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಈ ಪ್ರಕರಣದಲ್ಲಿ ನೆರವು ನೀಡಿರುವ ಇನ್ನೋರ್ವ ಗುಮಾಸ್ತ ಪ್ರಶಾಂತ್ ಎಂಬಾತ ಇನ್ನೂ ಪತ್ತೆಯಾಗಿಲ್ಲ.