ಮೂಡಬಿದಿರೆ: ತೌಳವ ಇಂದ್ರ ಸಮಾಜ(ರಿ.)ದ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಪದ ಸ್ವೀಕಾರ ಸಮಾರಂಭ ಇತ್ತೀಚೆಗೆ ಮೂಡಬಿದಿರೆ ಶ್ರೀಧವಳ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಸಂಘದ ಉಪಾಧ್ಯಕ್ಷ ಪ್ರೊ.ಅಕ್ಷಯ ಕುಮಾರ್ ಮಳಲಿ ಪ್ರಾಸ್ತಾವಿಕ ಭಾಷಣ ಮಾಡಿ, “2009ರಲ್ಲಿ ಸಮಾಜ ಮುಖಿ ಚಿಂತನೆಯ ಇಂದ್ರ ಬಂಧುಗಳ ಶ್ರಮದಲ್ಲಿ, ಸಮಸ್ತ ಇಂದ್ರ ವರ್ಗದವರನ್ನು ಒಗ್ಗೂಡಿಸಿ ಸಂಘ ಸ್ಥಾಪನೆಯಾಯಿತು. ಕಳೆದ ಹಲವಾರು ವರ್ಷಗಳಲ್ಲಿ ಸಂಘಟನೆಯು ಪೂಜಾಪಾಠಗಳ ತರಬೇತಿ, ಹಿರಿಯ ಪುರೋಹಿತರ ಸನ್ಮಾನ, ವಿದ್ಯಾರ್ಥಿ ಪುರಸ್ಕಾರ, ಕ್ರೀಡಾಕೂಟ, ಸಾಮೂಹಿಕ ಮೃತ್ಯುಂಜಯ ಆರಾಧನೆ, ಸಾಧಕರ ಸನ್ಮಾನ, ವಿದ್ಯಾರ್ಥಿ ವೇತನ ನೀಡಿಕೆ, ಆಟಿಕೂಟ, ಪ್ರವಾಸ, ಉಚಿತ ಆರೋಗ್ಯ ಶಿಬಿರ, ಸಾಮೂಹಿಕ ಉಪನಯನ ಸಂಸ್ಕಾರ ಹಾಗೂ ವೃತೋಪದೇಶಗಳು ಮುಂತಾದ ಪರಸ್ಪರ ಬಾಂಧವ್ಯ ಸಂವರ್ಧನೆಯ ಕೆಲಸ ಕಾರ್ಯಗಳನ್ನು ಮಾಡಿದೆ” ಎಂದರು. ಬಳಿಕ ಅತಿಥಿಗಳನ್ನು ಸ್ವಾಗತಿಸಿದರು.
ಹಿರಿಯ ಪುರೋಹಿತರಾದ ಶ್ರೀಮಿತ್ರಸೇನ ಇಂದ್ರ ಮುಂಡಾಜೆ, ನೆರೆಂಕಿ ಸುಭಾಶ್ಚಂದ್ರ ಇಂದ್ರ, ಆನಂತರಾಜ ಇಂದ್ರ ಬಂಟ್ವಾಳ ಹಾಗೂ ಶ್ಯಾಮ ರಾಜ ಇಂದ್ರ ನೆರೆಂಕಿ ಅವರನ್ನು ಶಾಲು ಹೊದೆಸಿ ಸನ್ಮಾನಿಸಲಾಯಿತು.
ಅಧ್ಯಕ್ಷತೆಯನ್ನು ವಹಿಸಿದ್ದ ಎಂ. ಜ್ಞಾನಚಂದ್ರ ಇಂದ್ರ ತಮ್ಮ ಅಧಿಕಾರಾವಧಿಯಲ್ಲಿ ಸಹಕರಿಸಿದ ಎಲ್ಲರನ್ನು ಸ್ಮರಿಸುತ್ತಾ ನೂತನ ಪದಾಧಿಕಾರಿಗಳಿಗೆ ಶುಭ ಕೋರಿದರು. ಪ್ರತಿ ವರ್ಷದಂತೆ ಈ ಬಾರಿಯೂ ಎಸ್ ಎಸ್ ಎಲ್ ಸಿ ಮತ್ತು ಪಿ. ಯು.ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಪ್ರಶಸ್ತ ವರ್ಷದಲ್ಲಿ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಅರ್ಪಣೆ ಮಾಡಲಾಯಿತು.
ಬೇರೆ ಬೇರೆ ಸಂಘ ಸಂಸ್ಥೆಗಳಲ್ಲಿ ವಿವಿಧ ಉನ್ನತ ಹುದ್ದೆಯನ್ನು ಅಲಂಕರಿಸಿರುವ ಸಮಾಜ ಬಾಂಧವರನ್ನು ಅಭಿನಂದಿಸಲಾಯಿತು.
ಅನಂತರ ನೂತನ ಪದಾಧಿಕಾರಿಗಳ ಪದ ಸ್ವೀಕಾರ ಕಾರ್ಯಕ್ರಮ ನಡೆಯಿತು. ಅರ್ಕಕೀರ್ತಿ ಇಂದ್ರರವರು ನೂತನ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು.
ನೂತನ ಅಧ್ಯಕ್ಷ ಧರಣೇಂದ್ರ ಇಂದ್ರರು ತಮ್ಮ ಮುಂದಿನ ಯೋಜನೆಗಳನ್ನು ಪ್ರಸ್ತಾಪಿಸಿದರು. ಕಾರ್ಯದರ್ಶಿ ಅಭಯ ಕುಮಾರ್ ಬಿ. ವಾರ್ಷಿಕ ವರದಿ ಓದಿದರು, ಸುವಿಧಿ ಇಂದ್ರ ಲೆಕ್ಕಪತ್ರ ಮಂಡಿಸಿದರು. ಮಹಾ ಸೇನಾ ಇಂದ್ರ ಪ್ರತಿಭಾ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ದಿವ್ಯಾ ವೀರೇಂದ್ರ ಶ್ರದ್ಧಾಂಜಲಿ ಅರ್ಪಣೆಮಾಡಿದರು. ಪ್ರಮೋದ್ ಕುಮಾರ್ ಅಭಿನಂದಿತರ ಪಟ್ಟಿ ಓದಿ ಕಾರ್ಯಕ್ರಮ ನಡೆಸಿಕೊಟ್ಟರು.
ಕೋಶಾಧಿಕಾರಿ ವಿಜಯ ಕುಮಾರಿ ಇಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕುಮಾರಿ ನಿಶ್ಚಿತ ಪ್ರಾರ್ಥನೆ ಮಾಡಿದರು, ಹರಿಶ್ಚಂದ್ರ ಇಂದ್ರ ಕಾರ್ಯಕ್ರಮ ನಿರೂಪಿಸಿದರು. ಸುಜ್ಞಾನ ಇಂದ್ರ ಧನ್ಯವಾದ ಸಮರ್ಪಿಸಿದರು.