ಮಂಗಳೂರು: ರಾತ್ರಿ 10 ಗಂಟೆಯ ನಂತರ ಧ್ವನಿವರ್ಧಕ ಬಳಸಬಾರದೆಂಬ ನಿಯಮದಿಂದ ಕರಾವಳಿ ಸಾಂಸ್ಕೃತಿಕ ವಲಯ ಸಂಕಷ್ಟಕ್ಕೆ ಸಿಲುಕಿದೆ. ನೂರಾರು ವರ್ಷಗಳಿಂದ ನಡೆಯುತ್ತಿರುವ ನಾಟಕ, ಯಕ್ಷಗಾನ, ಜಾತ್ರೆಗಳನ್ನು ಪೊಲೀಸರು ನಿಲ್ಲಿಸುತ್ತಿದ್ದು, ಕಲಾವಿದರು ಹಾಗೂ ಸಂಬಂಧಿತ ವಲಯಗಳ ಜೀವನೋಪಾಯವೇ ತತ್ತರಿಸಿದೆ ಎಂದು ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿ ಆತಂಕ ವ್ಯಕ್ತಪಡಿಸಿದ್ದಾರೆ.
ಕದ್ರಿಯ ವಿಶ್ವಹಿಂದೂ ಪರಿಷತ್ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತಾಡಿದ ಅವರು, ಅಲ್ಲದೆ ಸೌಂಡ್ಸ್ ಮ್ಯೂಸಿಕ್ ಸಂಸ್ಥೆಗಳನ್ನು ನಡೆಸಿದವರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದನ್ನು ಖಂಡಿಸಿ ಸೆ.9ರಂದು ಕದ್ರಿಯ ಗೋರಕ್ಷನಾಥ ಹಾಲ್‌ನಲ್ಲಿ ಯಕ್ಷಗಾನ–ನಾಟಕ ಕಲಾವಿದರು, ಸೌಂಡ್ಸ್, ಮ್ಯೂಸಿಕ್, ಶಾಮಿಯಾನ ಸೇರಿದಂತೆ ಎಲ್ಲಾ ವಿಭಾಗದವರು ಸೇರಿ ವಿಶ್ವಹಿಂದೂ ಪರಿಷತ್ ನೇತೃತ್ವದಲ್ಲಿ ಜನಜಾಗೃತಿ ಸಭೆ ನಡೆಸಲಿದ್ದೇವೆ ಎಂದರು.
ಮುಖ್ಯ ಅಂಶಗಳು:
-ನಾಟಕ–ಯಕ್ಷಗಾನಕ್ಕೆ ಧ್ವನಿವರ್ಧಕವಿಲ್ಲದೆ ಪ್ರದರ್ಶನ ಅಸಾಧ್ಯ.
-ಶೇ.80ರಷ್ಟು ಕಲಾವಿದರು ಕಲೆಯನ್ನೇ ನಂಬಿ ಜೀವನೋಪಾಯ ಮಾಡಿಕೊಂಡಿದ್ದಾರೆ.
-ಜಿಲ್ಲೆಯಲ್ಲೇ 1200 ಸೌಂಡ್ಸ್ ಮಾಲೀಕರು, 5–6 ಸಾವಿರ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ.
-ಶಾಮಿಯಾನ ವಲಯದಲ್ಲಿ 25 ಸಾವಿರ ಕಾರ್ಮಿಕರ ಬದುಕು ಹಾಳಾಗುವ ಆತಂಕ
– ಜನಜಾಗೃತಿ ಸಭೆಗೆ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳ 90ರಷ್ಟು ನಾಟಕ ತಂಡಗಳು ಬೆಂಬಲ
“ಧ್ವನಿವರ್ಧಕವಿಲ್ಲದೆ ಕಾರ್ಯಕ್ರಮ ನಡೆಸಲು ಸಾಧ್ಯವಿಲ್ಲ. ಕಲಾವಿದರಿಂದ ಹಿಡಿದು ಸೌಂಡ್ಸ್, ಲೈಟ್ಸ್, ಶಾಮಿಯಾನ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಇದು ಕಾನೂನು ನೆಪದಲ್ಲಿ ಕರಾವಳಿಯ ಸಾಂಸ್ಕೃತಿಕ ಅಂಗಡಿಯನ್ನೇ ಬಂದ್ ಮಾಡುವಂತಾಗಿದೆ” ಎಂದು ನಾಟಕಕಾರ ದೇವದಾಸ್ ಕಾಪಿಕಾಡ್ ಆಕ್ರೋಶ ವ್ಯಕ್ತಪಡಿಸಿದರು.
ಲೌಟ್ಸ್ ಸೌಂಡ್ಸ್ ಮಾಲೀಕರ ಸಂಘದ ಧನರಾಜ್ ಪರಂಗಿಪೇಟೆ ಮಾತನಾಡಿ, “ಜಿಲ್ಲೆಯಲ್ಲಿ 1200 ಮಾಲೀಕರು, 5–6 ಸಾವಿರ ಕಾರ್ಮಿಕರು ಇದ್ದಾರೆ. ಮಳೆಗಾಲದ ಬಳಿಕ ಉತ್ಸವ ಸೀಸನ್ ಬರಲಿದೆ ಎಂಬ ನಿರೀಕ್ಷೆಯಲ್ಲಿ ಹೂಡಿಕೆ ಮಾಡಿದ್ದೇವೆ. ಈಗ ರಾತ್ರಿ ಕಾರ್ಯಕ್ರಮ ನಿಲ್ಲಿಸಬೇಕು ಎಂದರೆ ನಮ್ಮ ಸ್ಥಿತಿ ಏನು?” ಎಂದು ಪ್ರಶ್ನಿಸಿದರು.
ಶಾಮಿಯಾನ ವಲಯದಲ್ಲೇ 25 ಸಾವಿರ ಕಾರ್ಮಿಕರು ಬದುಕು ನಡೆಸುತ್ತಿದ್ದಾರೆ. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳ 90ರಷ್ಟು ನಾಟಕ ತಂಡಗಳು ಜನಜಾಗೃತಿ ಸಭೆಗೆ ಬೆಂಬಲ ಸೂಚಿಸಿರುವುದಾಗಿ ನಾಟಕ ಕಲಾವಿದರ ಸಂಘದ ಕೃಷ್ಣ ಮಂಜೇಶ್ವರ್ ತಿಳಿಸಿದರು.
ಕಾನೂನು ಹೋರಾಟ
ರಾಜ್ಯ ಸರಕಾರ 2022ರಲ್ಲಿ ಜಾರಿಗೆ ತಂದ ನಿಯಮದಿಂದ ಈ ಸಮಸ್ಯೆ ಎದುರಾಗಿದೆ. ಕಾನೂನು ಹೋರಾಟಕ್ಕೆ ಇಳಿಯುವ ವಿಚಾರ ಜನಜಾಗೃತಿ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದು ಪಟ್ಲ ಸತೀಶ್ ಶೆಟ್ಟಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವಿಹಿಂಪದ ಶರಣ್ ಪಂಪ್ವೆಲ್, ಪುರುಷೋತ್ತಮ್, ವಿವಿಧ ಸಂಘಗಳ ಪದಾಧಿಕಾರಿಗಳು ಇದ್ದರು.