ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಈ ವರ್ಷ 50ಕ್ಕೆ ಕಾಲಿಟ್ಟರೂ, ಅವರ ಹರೆಯದ ಹುಡುಗಿಯಂತಿರುವ ಅಗಾಧ ಸೌಂದರ್ಯ ಮತ್ತು ಮೈಕಾಂತಿ, ಸ್ಲಿಮ್ ದೇಹಾಕೃತಿ ಇನ್ನೂ ಅಭಿಮಾನಿಗಳನ್ನು ಬೆರಗುಗೊಳಿಸುತ್ತಲೇ ಇದೆ. ರುಚಿಕರ ಆಹಾರ ಪ್ರಿಯೆಯಾಗಿರುವ ಶಿಲ್ಪಾ, ತನ್ನ ಜೀವನಶೈಲಿಯಲ್ಲಿ ಶಿಸ್ತಿನ ಆಹಾರ ಪದ್ಧತಿ ಅನುಸರಿಸುವುದರ ಮೂಲಕ ಸಮತೋಲನ ಸಾಧಿಸಿದ್ದಾರೆ. ಹಾಗಾದರೆ ಅವರ ಚಿರಯೌವನದ ಗುಟ್ಟೇನೆಂದು ನೋಡೋಣ
ದಿನದ ಆರಂಭ ಹೀಗೆ
ಶಿಲ್ಪಾ ಶೆಟ್ಟಿ ಬೆಳಗ್ಗೆಯೇ ನೋನಿ ಜ್ಯೂಸ್ (ಸುಮಾರು 4 ಹನಿ) ಸೇವಿಸಿ, ನಂತರ ಬಿಸಿ ನೀರು ಕುಡಿಯುತ್ತಾರೆ. ಅದರ ಬಳಿಕ, ಆಯುರ್ವೇದದ ಎಣ್ಣೆ ಹಚ್ಚುವುದು (oil pulling) ಪದ್ಧತಿ ಅನುಸರಿಸುತ್ತಾರೆ. ತಂಪು ನೀರಿಗೆ ತೆಂಗಿನ ಎಣ್ಣೆ ಸೇರಿಸಿ 5–10 ನಿಮಿಷ ಬಾಯಿ ಮುಕ್ಕಳಿಸಿ ಬಾಯಿಯ ಆರೋಗ್ಯ ಕಾಪಾಡಿಕೊಳ್ಳುತ್ತಾರೆ. ಕೆಲವು ದಿನಗಳಲ್ಲಿ ಅವರು ಅಲೋವೆರಾ ಜ್ಯೂಸ್, ತುಳಸಿ ಎಲೆ, ಬೆಲ್ಲ ಹಾಗೂ ಶುಂಠಿ ಮಿಶ್ರಣ ಪಾನೀಯವನ್ನೂ ಸೇವಿಸುತ್ತಾರೆ.
ಬೆಳಗ್ಗಿನ ಉಪಾಹಾರ
ಬೆಳಗಿನ ಉಪಾಹಾರದಲ್ಲಿ ಅವರು ಹಣ್ಣುಗಳು, ಓಟ್ಸ್, ಮ್ಯೂಸ್ಲಿ ಅಥವಾ ಬಾದಾಮಿ ಹಾಲು–ಓಟ್ಸ್–ಬಾಳೆಹಣ್ಣು–ಜೇನುತುಪ್ಪ ಮಿಶ್ರಿತ ಸ್ಮೂದಿ ಸೇವಿಸುತ್ತಾರೆ. ಮಧ್ಯಾಹ್ನಕ್ಕೆ ಮುನ್ನ “ಸೆಕೆಂಡ್ ಬ್ರೇಕ್‌ಫಾಸ್ಟ್” ರೂಪದಲ್ಲಿ ಅವೋಕಾಡೊ ಸಹಿತ ಮೊಟ್ಟೆ ಹಾಗೂ ಗೋಧಿ ಚಪಾತಿ ತಿನ್ನುತ್ತಾರೆ. ಸಕ್ಕರೆಯ ಬದಲು ಜೇನು, ಬೆಲ್ಲ ಪುಡಿ, ತೆಂಗಿನ ಸಿಹಿ ಬಳಕೆ ಮಾಡುವುದನ್ನು ಅವರು ಅಭ್ಯಾಸ ಮಾಡಿಕೊಂಡಿದ್ದಾರೆ.
ಮಧ್ಯಾಹ್ನದ ಭೋಜನ
ಮಧ್ಯಾಹ್ನದ ಊಟದಲ್ಲಿ ಶಿಲ್ಪಾ ಅನ್ನ–ದಾಳ್, ಚಪಾತಿ, ಕೋಳಿ ಕರಿ(ತುಳುನಾಡ್ ಶೈಲಿ), ತರಕಾರಿಗಳನ್ನು ಸೇವಿಸುತ್ತಾರೆ. ಕೆಲವೊಮ್ಮೆ ಕೋಳಿಯ ಬದಲು ಮೀನು ಕೂಡ ಸೇರಿಸುತ್ತಾರೆ. ಜೊತೆಗೆ ಸೌತೆಕಾಯಿ–ಕ್ಯಾರೆಟ್ ಸ್ಯಾಲಡ್ ಅವಶ್ಯ.
ತಮ್ಮದೇ ಆದ “ಯೋಗಿ ಬೌಲ್” ಎಂದೂ ಕರೆಯುವ ಪಾಕವಿಧಾನವನ್ನು ಕೆಲವೊಮ್ಮೆ ಆರಿಸುತ್ತಾರೆ. ಇದರಲ್ಲಿ ಬ್ರೌನ್ ರೈಸ್ ಅಥವಾ ಜೋಳ, ಹಸಿರು ಸೊಪ್ಪು, ಕೋಳಿ, ತರಕಾರಿ ಎಲ್ಲವೂ ಒಂದೇ ಪಾತ್ರೆಯಲ್ಲಿ ಇರುತ್ತವೆ.
ಅವರ ಊಟದಲ್ಲಿ ಒಂದು ಚಮಚ ತುಪ್ಪ ಕಡ್ಡಾಯ. ತೂಕ ನಿಯಂತ್ರಿಸಲು ಕಷ್ಟವಾಗುವವರಿಗೆ ಸರಿಯಾದ ಕೊಬ್ಬು ಪದಾರ್ಥಗಳು ನೆರವಾಗುತ್ತವೆ. ತೆಂಗಿನ ಹಾಲು, ತುಪ್ಪ ಇಂತಹ ಆಹಾರಗಳು ಹೊಟ್ಟೆ ತುಂಬಿಸುತ್ತವೆ, ತೂಕ ನಿಯಂತ್ರಣದಲ್ಲಿಡುತ್ತವೆ, ಜೊತೆಗೆ ಚರ್ಮಕ್ಕೆ ನೈಸರ್ಗಿಕ ಹೊಳಪು ಕೊಡುತ್ತವೆ ಎನ್ನುವುದನ್ನು ಶಿಲ್ಪಾ ಶೆಟ್ಟಿ ಕಂಡುಕೊಂಡಿದ್ದಾರೆ
ಸಂಜೆ–ರಾತ್ರಿ ಆಹಾರ
ಮಧ್ಯಾಹ್ನದ ಬಳಿಕ ಶಿಲ್ಪಾ ಚಹಾ ಜೊತೆ ಮೊಟ್ಟೆ ಅಥವಾ ಸ್ಯಾಂಡ್ವಿಚ್ ಸೇವಿಸುತ್ತಾರೆ. ಸಂಜೆ 7.30ರೊಳಗೆ ರಾತ್ರಿ ಊಟ ಮುಗಿಸಿಕೊಳ್ಳುವುದು ಅವರ ನಿಯಮ. ರಾತ್ರಿ ಊಟ ಹಗುರವಾಗಿದ್ದು, ಸಾಮಾನ್ಯವಾಗಿ ಸೂಪ್ ಮತ್ತು ಗ್ರಿಲ್ ಪದಾರ್ಥಗಳಿರುತ್ತವೆ. ರಾತ್ರಿ ಕಾರ್ಬೋಹೈಡ್ರೇಟ್ ಸೇವನೆಯನ್ನು ಅವರು ನಿಯಂತ್ರಿಸುತ್ತಾರೆ.
‘ಚೀಟ್ ಡೇ ಕ್ವೀನ್’
ಆಹಾರದಲ್ಲಿ ಶಿಸ್ತು ಪಾಲಿಸುವ ಶಿಲ್ಪಾ, ವಾರಕ್ಕೆ ಒಂದು ದಿನ (ಭಾನುವಾರ) ಚೀಟ್ ಡೇ ಆಚರಿಸುತ್ತಾರೆ. ಆ ದಿನ ಅವರು ಇಷ್ಟವಾದ ತಿನಿಸುಗಳನ್ನು ತಿನ್ನುತ್ತಾರೆ. “ಭಾನುವಾರ ನನ್ನ ಚೀಟ್ ಡೇ. ನಾನು ಎಲ್ಲವನ್ನೂ ತಿನ್ನುತ್ತೇನೆ, ಅದನ್ನು ಇನ್‌ಸ್ಟಾಗ್ರಾಂನಲ್ಲಿ ಹಾಕುತ್ತೇನೆ. ಇದು ನನಗೆ ಪ್ರೇರಣೆ ನೀಡುತ್ತದೆ. ಇತರ ದಿನಗಳಲ್ಲಿ ನಿಯಮ ಪಾಲಿಸಲು ಸಹಾಯ ಮಾಡುತ್ತದೆ,” ಎಂದು ಶಿಲ್ಪಾ ಹೇಳಿದ್ದಾರೆ.
ಶಿಲ್ಪಾ ಶೆಟ್ಟಿ ಆಹಾರದಲ್ಲಿ ಅತಿಯಾದ ನಿಯಮ ಮಾಡುವುದಿಲ್ಲ. ಸಮತೋಲಿತ ಆಹಾರವೇ ಅವರ ಆರೋಗ್ಯದ ಗುಟ್ಟು. ಸರಳ ಭಾರತೀಯ ಆಹಾರ, ಆರೋಗ್ಯಕರ ಕೊಬ್ಬು, ಸರಿಯಾದ ಸಮಯಕ್ಕೆ ಊಟ ಹಾಗೂ ವಾರಕ್ಕೆ ಒಂದು ಚೀಟ್ ಡೇ—ಇವುಗಳೇ ಅವರ ಯೌವನವಂತಿಕೆಯ ರಹಸ್ಯ