ತಿರುವನಂತಪುರ: ಮಲಯಾಳಂನ ಖ್ಯಾತ ನಟ ದುಲ್ಕರ್ ಸಲ್ಮಾನ್ ಅವರ ಸಂಸ್ಥೆ ವೇಫೇರರ್ ಫಿಲ್ಮ್ ನಲ್ಲಿ ನಿರ್ಮಾಣವಾಗಿರುವ ಸಿನಿಮಾ “ಲೋಕಾ ಚಾಪ್ಟರ್ 1: ಚಂದ್ರ’ದಲ್ಲಿ ಬೆಂಗಳೂರಿನ ಹೆಣ್ಣುಮಕ್ಕಳ ಬಗ್ಗೆ ಆಕ್ಷೇಪಾರ್ಹ ಸಂಭಾಷಣೆಯಿದ್ದು, ಇದು ವಿವಾದಕ್ಕೆ ಕಾರಣವಾಗಿದೆ. ವಿವಾದದ ಬೆನ್ನಲ್ಲೇ ಇದೀಗ ಚಿತ್ರತಂಡ ಕನ್ನಡಿಗರಿಗೆ ಕ್ಷಮೆ ಕೇಳಿದ್ದು, ಸಂಭಾಷಣೆಯನ್ನು ತೆಗೆಯುವುದಾಗಿ ಭರವಸೆ ನೀಡಿದ್ದಾರೆ.
ಕಲ್ಯಾಣಿ ಪ್ರಿಯ ದರ್ಶಿನಿ ಮುಖ್ಯಭೂಮಿಕೆಯ ಚಿತ್ರದಲ್ಲಿನ ಸ್ತ್ರೀ ವಿರೋಧಿ ಪಾತ್ರ ನಾಚಿಯಪ್ಪ ಗೌಡ “ಬೆಂಗಳೂರಿನ ಹುಡುಗಿಯರು ಚಾರಿತ್ರ್ಯಹೀನರು’ ಎಂದು ಹೇಳಿದ್ದು, ಇದರಿಂದ ಕನ್ನಡಿಗರ ಭಾವನೆಗೆ ಧಕ್ಕೆಯುಂಟಾಗಿದೆ ಎಂದು ಆಕ್ಷೇಪ ವ್ಯಕ್ತವಾಗಿತ್ತು. ಇದಲ್ಲದೇ ಚಿತ್ರದಲ್ಲಿ ಬೆಂಗಳೂರನ್ನು ಮಾದಕವಸ್ತುಗಳ ಕೇಂದ್ರ ಎಂದು ಬಿಂಬಿಸಲಾಗಿದೆ ಎಂಬ ಆರೋಪಗಳೂ ಕೇಳಿಬಂದಿವೆ. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದು ಈ ಬೆನ್ನಲ್ಲೇ ಚಿತ್ರತಂಡವು ಜನರಲ್ಲಿ ಕ್ಷಮೆಯಾಚಿಸಿದೆ.
ಇದೇ ವೇಳೆ ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಈ ಬಗ್ಗೆ ಮಾತನಾಡಿ, ಈ ವಿಚಾರವನ್ನು ಸಾಮಾಜಿಕ ಮಾಧ್ಯಮ ಮೇಲ್ವಿಚಾರಣೆಯ ಪಡೆ ಹಾಗೂ ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ವು ಪರಿಶೀಲನೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದಿದ್ದಾರೆ.
(ಜಾಹೀರಾತು)ಮಂಗಳೂರು: ADVOCATE ಕಚೇರಿಗೆ ಪದವಿ ಪಡೆದಿರುವ ಯುವತಿ ಬೇಕಾಗಿದ್ದಾರೆ. ಸಂಪರ್ಕ ಸಂಖ್ಯೆ: 8660040298