ಮಂಗಳೂರು: ಇನ್‌ಸ್ಟಾಗ್ರಾಂನಲ್ಲಿ ಪರಿಚಯಗೊಂಡ ಅಪ್ರಾಪ್ತೆಯೊಬ್ಬಳನ್ನು ಯುವಕರ ಗುಂಪೊಂದು ಸಾಮೂಹಿಕ ಅತ್ಯಾಚಾರ ಎಸಗಿದ್ದಲ್ಲದೆ, ಇದರ ದೃಶ್ಯವನ್ನು ವೀಡಿಯೋ ಮಾಡಿ ಹಂಚಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಏಳು ಮಂದಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಈ ಘಟನೆಯಿಂದ ಜಿಲ್ಲೆಯ ಜನತೆ ತಲೆತಗ್ಗಿಸುಂಥಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯ ಕೇಳಿಬಂದಿದೆ.
ಬಂಧಿತರನ್ನು ಕಾರ್ತಿಕ್, ರಾಕೇಶ್ ಸಲ್ದಾನ, ಜೀವನ್, ಸಂದೀಪ್, ರಕ್ಷಿತ್, ಶ್ರವಣ್ ಮತ್ತು ಸುರೇಶ್ ಎಂದು ಗುರುತಿಸಲಾಗಿದೆ. ಕೃತ್ಯದಲ್ಲಿ ಅಪ್ರಾಪ್ತ ಬಾಲಕನೂ ಶಾಮೀಲಾಗಿದ್ದು, ಈತನನ್ನು ಬಾಲಾಪರಾಧಗೃಹಕ್ಕೆ ಸೇರಿಸಲಾಗಿದೆ. ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಇನ್ಸ್ಟಾಗ್ರಾಂ ಮೂಲಕ ಪರಿಚಯ
ಮಂಗಳೂರು ಹೊರವಲುದ ಗುರುಪುರ ಕೈಕಂಬದ ಸಮೀಪದ ಕಾಲೇಜೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಎರಡು ತಿಂಗಳ ಹಿಂದೆ ಆರೋಪಿ ಕಾರ್ತಿಕ್ ಇನ್‌ಸ್ಟಾಗ್ರಾಂ ಮೂಲಕ ಪರಿಚಯ ಬೆಳೆಸಿಕೊಂಡು, ಸಂವಾದ ನಡೆಸುತ್ತಿದ್ದ.
ಇದರ ಮುಂದುವರಿದ ಭಾಗವಾಗಿ, 2025ರ ಜೂನ್ ತಿಂಗಳ ಕೊನೆಯ ಶನಿವಾರ ಮಧ್ಯಾಹ್ನ, ಕಾರ್ತಿಕ್ ತನ್ನ ಸ್ಕೂಟರ್‌ನಲ್ಲಿ ಆಕೆಯನ್ನು ಕರೆದುಕೊಂಡು ಹೋಗಿ ವಳಚ್ಚಿಲ್‌ನಲ್ಲಿರುವ ಹೋಟೆಲ್‌ನಲ್ಲಿ ಊಟ ಮಾಡಿಸಿದ್ದಾನೆ. ಅಲ್ಲಿ ಆಕೆಯನ್ನು ಪುಸಲಾಯಿಸಿ ಅಡ್ಯಾರ್ ಜಲಪಾತದ ಹತ್ತಿರದ ಕಾಡಿಗೆ ಕರೆದುಕೊಂಡು ಹೋಗಿ ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಬಾಲಕಿ ಆರೋಪಿಸಿದ್ದಾಳೆ.
ಇದೇ ಸಮಯಕ್ಕೆ ಕಾರ್ತಿಕ್‌ನ ಗೆಳೆಯ ರಾಕೇಶ್ ಸಲ್ದಾನ ಕೂಡಾ ಅಲ್ಲೇ ಇದ್ದು, ಆತನೂ ಅತ್ಯಾಚಾರ ಎಸಗಿದ್ದಾನೆ. ರಾಕೇಶ್ ಸಲ್ದಾನ ಮಾಡುತ್ತಿದ್ದ ಕೃತ್ಯವನ್ನು ಕಾರ್ತಿಕ್ ವಿಡಿಯೋ ಮಾಡಿದ್ದು, ಅದನ್ನು ಆತ ತನ್ನ ಸ್ನೇಹಿತರಿಗೂ ಶೇರ್ ಮಾಡಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಬಾಲಕಿ ದೂರು ನೀಡಿದ್ದಾಳೆ ಎನ್ನಲಾಗಿದೆ.
ದೂರು ಕೊಟ್ಟ ಬಾಲಕಿ
ಪ್ರೀತಿಯ ನೆಪದಲ್ಲಿ ಕಾರ್ತಿಕ್ ಮಾಡಿದ ಮೋಸ, ಹಾಗೂ ಆತನ ಸ್ನೇಹಿತರ ಕೃತ್ಯದಿಂದ ಕಂಗಾಲಾದ ಬಾಲಕಿ ಕೊನೆಗೂ ಧೈರ್ಯ ಮಾಡಿ
ಆಗಸ್ಟ್ 16ರಂದು ಬಜ್ಪೆ ಪೊಲೀಸರಿಗೆ ದೂರು ನೀಡಿದ್ದಳು. ಬಾಲಕಿ ದೂರಿನ ಆಧಾರದಲ್ಲಿ ಪೊಲೀಸರು ತನಿಖೆ ನಡೆಸಿದ್ದು, ಕಾರ್ತಿಕ್ ಹಾಗೂ ರಾಕೇಶ್ ಜೊತೆಗೆ ಸಹಕರಿಸಿದ್ದ ಉಳಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಜಿಲ್ಲೆಯೇ ತಲೆತಗ್ಗಿಸುವ ಘಟನೆ
ಇಂತಹದ್ದೊಂದು ಸಾಮೂಹಿಕ ಅತ್ಯಾಚಾರ ಪ್ರಕರಣ ಮಂಗಳೂರು ಜಿಲ್ಲೆಯ ಗೌರವಕ್ಕೆ ಧಕ್ಕೆ ತಂದಿಟ್ಟಿದೆ. ಪ್ರೀತಿ, ಸ್ನೇಹ ಎಂಬ ಪವಿತ್ರ ಸಂಬಂಧಗಳ ಅರ್ಥ ತಿಳಿಯುವ ಮುನ್ನವೇ ಅಪ್ರಾಪ್ತ ವಯಸ್ಸಿನ ಮಕ್ಕಳು ಅತ್ಯಾಚಾರದಂತಹ ಕೃತ್ಯಗಳಿಗೆ ಬಲಿಯಾಗುತ್ತಿರುವುದು ಜಿಲ್ಲೆಯ ಜನತೆಯನ್ನೇ ಬೆಚ್ಚಿಬೀಳಿಸುವಂತೆ ಮಾಡಿದೆ. ಮಕ್ಕಳಿಗೆ ದುಬಾರಿ ಮೊಬೈಲ್ ಕೊಡುವ ಪೋಷಕರು ಅದನ್ನು ಯಾವ ರೀತಿ ದುರುಪಯೋಗಪಡಿಸುತ್ತಾರೆ ಎನ್ನುವ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಅನೇಕ ಯುವಕರು ನಕಲಿ ಖಾತೆ ತೆರೆದು, ಸ್ನೇಹ–ಪ್ರೀತಿಯ ಹೆಸರಿನಲ್ಲಿ ಅಪ್ರಾಪ್ತ ಬಾಲಕಿಯರ ವಿಶ್ವಾಸ ಗಳಿಸಿ ಅದನ್ನು ದುರುಪಯೋಗಪಡಿಸುತ್ತಿರುವುದು ನಿಜಕ್ಕೂ ಕಳವಳಕಾರಿ ಘಟನೆಯಾಗಿದೆ. ಇದೊಂದು ಗಂಭೀರ ಪ್ರಕರಣವಾಗಿದ್ದರೂ ಜಿಲ್ಲೆಯ ಜನತೆ ಇದೊಂದು ಸಾಮಾನ್ಯ ಪ್ರಕರಣ ಎನ್ನುವಂತೆ ಪರಿಗಣಿಸಿರುವುದು ನಿಜಕ್ಕೂ ಆತಂಕಕಾರಿ.
ಪೋಷಕರು ತಮ್ಮ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಯಾವ ರೀತಿ ಬಳಸುತ್ತಿದ್ದಾರೆ ಎಂದು ಕಣ್ಣಿಟ್ಟುಕೊಳ್ಳಬೇಕಾಗಿದೆ. ಅಪರಿಚಿತರೊಂದಿಗೆ ಬೆಳೆಸುವ ಸ್ನೇಹ ಅಪಾಯಕಾರಿ ಎನ್ನುವುದನ್ನು ತಮ್ಮ ಮಕ್ಕಳಿಗೆ ಮನವರಿಕೆ ಮಾಡಿಸಬೇಕಿದೆ. ಶಾಲೆ–ಕಾಲೇಜುಗಳು ಸೈಬರ್ ಸುರಕ್ಷತಾ ಜಾಗೃತಿ ತರಗತಿಗಳನ್ನು ನಡೆಸಬೇಕು ಎಂಬ ಆಗ್ರಹ ಕೇಳಿಬಂದಿದೆ. ಅಲ್ಲದೆ ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸುವಂತೆ ಒತ್ತಾಯ ಕೇಳಿಬಂದಿದೆ.