ʻಹಿಂದೂ ಆಚಾರ ಪಾಲಿಸುವ ಕ್ರೈಸ್ತ ಮಹಿಳೆಯನ್ನು ದೂಷಿಸುವುದು ಅನ್ಯಾಯ; ಜಾರಂದಾಯನ ಸೇವೆಯಲ್ಲಿ ಲೋಪವಾಗಿಲ್ಲʼ

ಮಂಗಳೂರು: ಮಂಗಳೂರಿನ ಬೋಳೂರಿನ ಜಾರಂದಾಯ ದೈವಸ್ಥಾನದ ಬಂಟ ದೈವಕ್ಕೆ ಕ್ರೈಸ್ತ ಮಹಿಳೆಗೆ ಹುಟ್ಟಿದ ಯುವಕ ನರ್ತನ ಸೇವೆ ಮಾಡಿದ್ದಾನೆ ಎಂಬ ವಿವಾದಕ್ಕೆ ಸಂಬಂಧಿಸಿದಂತೆ, ಪಂಬದ ಸಮುದಾಯದ ಮುಖಂಡರು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸ್ಪಷ್ಟೀಕರಣ ನೀಡಿದ್ದಾರೆ. ಕಳೆದ ಮಾರ್ಚ್ 13 ರಂದು ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಡಾ. ರತಿ ಅವರು ಮಾಡಿದ್ದ ಆರೋಪಗಳನ್ನು ತಳ್ಳಿಹಾಕಿರುವ ಸಮುದಾಯದ ಪ್ರಮುಖರು, ದೈವ ಸೇವೆಯಲ್ಲಿ ಯಾವುದೇ ಧಾರ್ಮಿಕ ಅಥವಾ ಜಾತೀಯ ಲೋಪವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಗಣೇಶ್ ಪದವಿನಂಗಡಿ ಅವರು ಕ್ರಿಶ್ಚಿಯನ್ ಮಹಿಳೆಯನ್ನು ವಿವಾಹವಾಗಿರುವುದು ಸತ್ಯವಾಗಿದ್ದರೂ, ಆಕೆ ಮದುವೆಯಾದ ಕ್ಷಣದಿಂದಲೇ ಹಿಂದೂ ಧರ್ಮದ ಆಚಾರ-ವಿಚಾರಗಳನ್ನು ಮತ್ತು ಪಂಬದ ಜನಾಂಗದ ನೀತಿ-ನಿಯಮಗಳನ್ನು ಅತ್ಯಂತ ನಿಷ್ಠೆಯಿಂದ ಪಾಲಿಸಿಕೊಂಡು ಬರುತ್ತಿದ್ದಾರೆ. ಒಬ್ಬ ಮಹಿಳೆ ತನ್ನ ಮೂಲ ಧರ್ಮವನ್ನು ಬಿಟ್ಟು ಮತ್ತೊಂದು ಧರ್ಮದ ಸಂಪ್ರದಾಯಗಳನ್ನು ಪೂರ್ಣವಾಗಿ ಅಳವಡಿಸಿಕೊಂಡಾಗ ಆಕೆಯನ್ನು ಆ ಸಮುದಾಯದ ಅವಿಭಾಜ್ಯ ಅಂಗವಾಗಿ ಪರಿಗಣಿಸುವುದು ಸಾಮಾಜಿಕ ನ್ಯಾಯವಾಗಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯನ್ನು ದೂಷಿಸುವುದು ಮತ್ತು ಅವರ ಕುಟುಂಬದ ವೃತ್ತಿ ಗೌರವಕ್ಕೆ ಧಕ್ಕೆ ತರುವುದು ಅತ್ಯಂತ ಅನ್ಯಾಯದ ಪರಮಾವಧಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಗಣೇಶ್ ಅವರ ಪುತ್ರ ಸುಶಾಂತ್ ಪಂಬದ ಅವರು ಕಾನೂನುಬದ್ಧವಾಗಿ ಜಾತಿ ಪ್ರಮಾಣಪತ್ರ ಹಾಗೂ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಹೊಂದಿದ್ದು, ಬೋಳೂರಿನಲ್ಲಿ ನಡೆದ ಜಾರಂದಾಯ ದೈವದ ಸೇವೆಯು ದೈವೀ ಅಪ್ಪಣೆಯಂತೆಯೇ ಅತ್ಯಂತ ಶ್ರದ್ಧಾಭಕ್ತಿಯಿಂದ ನಡೆದಿದೆ. ಈ ಸೇವೆಯಿಂದ ಊರಿಗಾಗಲಿ ಅಥವಾ ದೈವಸ್ಥಾನಕ್ಕಾಗಲಿ ಯಾವುದೇ ಅಶುದ್ಧಿ ಅಥವಾ ತೊಂದರೆಯಾಗಿಲ್ಲ.

“ದೈವಾರಾಧನಾ ಪರಂಪರೆಗೆ ಘೋರ ಅಪಚಾರ – ನೇಮದಲ್ಲಿ ಕ್ರಿಶ್ಚಿಯನ್ ವ್ಯಕ್ತಿಯಿಂದ ದೈವ ನರ್ತನ ಸೇವೆ”

ಕಳೆದ 31 ವರ್ಷಗಳಿಂದ ಕುಂಬ್ಳೆ, ವಿಟ್ಲ, ಮಂಜೇಶ್ವರ, ಕೋಳಿಯೂರು ಸೇರಿದಂತೆ ಹತ್ತು ಹಲವು ಮಾಗಣೆಗಳಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿರುವ ನಮಗೆ ಈ ಕ್ಷೇತ್ರದ ಮರ್ಯಾದೆಯ ಅರಿವಿದೆ. ಕಾಸರಗೋಡು ಮತ್ತು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಭಕ್ತರು ಆಹ್ವಾನಿಸಿದರೆ ಮುಂದೆಯೂ ನಿಷ್ಠೆಯಿಂದ ದೈವ ಸೇವೆ ಸಲ್ಲಿಸಲು ಸಿದ್ಧರಿದ್ದೇವೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು. ಅಲ್ಲದೆ ನೇಮ ಕಟ್ಟಿದವ ಪಂಬದ ಸಮುದಾಯಕ್ಕೆ ಸೇರಿದವನು ಎನ್ನುವ ದಾಖಲೆ ಪ್ರದರ್ಶಿಸಿದರು.

ಈ ಸುದ್ದಿಗೋಷ್ಠಿಯಲ್ಲಿ ಗಣೇಶ್ ಕಜೆ, ಕಮಲಾಕ್ಷ ಪಂಬದ ಗಂಧಕಾಡು, ಸೂರಜ್ ಚಿಪ್ಪಾರು, ಚಿಪ್ಪಾರು ಗಣೇಶ್ ಪಂಬದ, ಸವಿತಾ ಹಾಗೂ ಸುಶಾಂತ್ ಬಂಗೇರ ಅವರು ಉಪಸ್ಥಿತರಿದ್ದರು.

error: Content is protected !!