ಯಕ್ಷಗಾನ, ಕಥಕ್, ಮಲ್ಲಕಂಬದ ಜುಗಲ್‌ಬಂದಿ:‌ ಮಾ.21 ಕೀರ್ತಿಶೇಷ ಡಾ. ಎನ್. ವಿನಯ್ ಹೆಗ್ಡೆ ಸ್ಮರಣಾರ್ಥ ʻಆಳ್ವಾಸ್ ಸಾಂಸ್ಕೃತಿಕ ವೈಭವ’

ಮಂಗಳೂರು: ಕರಾವಳಿಯ ಸಾಂಸ್ಕೃತಿಕ ರಾಜಧಾನಿ ಮಂಗಳೂರಿನಲ್ಲಿ ಮತ್ತೊಮ್ಮೆ ಕಲೆ ಮತ್ತು ಸಂಸ್ಕೃತಿಯ ಅದ್ಭುತ ಲೋಕ ತೆರೆದುಕೊಳ್ಳಲಿದೆ. ಆಳ್ವಾಸ್ ನುಡಿಸಿರಿ-ವಿರಾಸತ್ ಮಂಗಳೂರು ಘಟಕದ ಆಶ್ರಯದಲ್ಲಿ, ನಗರದ ಲಾಲ್‌ಬಾಗ್ ಕರಾವಳಿ ಉತ್ಸವ ಮೈದಾನದಲ್ಲಿ ಮಾರ್ಚ್ 21ರ ಶನಿವಾರ ಸಂಜೆ 6:15ಕ್ಕೆ ʻಆಳ್ವಾಸ್ ಸಾಂಸ್ಕೃತಿಕ ವೈಭವ’ ಮೇಳೈಸಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವಾ ಘೋಷಿಸಿದ್ದಾರೆ.

ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಾರಿಯ ಕಾರ್ಯಕ್ರಮದ ರೂಪುರೇಷೆಗಳನ್ನು ಅವರು ಹಂಚಿಕೊಂಡರು.

ಈ ಬಾರಿಯ ಸಾಂಸ್ಕೃತಿಕ ಹಬ್ಬವು ಕೀರ್ತಿಶೇಷ ಡಾ. ಎನ್. ವಿನಯ್ ಹೆಗ್ಡೆ ಅವರ ಸ್ಮರಣಾರ್ಥವಾಗಿ ಅವರಿಗೆ ಅರ್ಪಿತವಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಲೋಕಸಭಾ ಸದಸ್ಯರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ನೆರವೇರಿಸಲಿದ್ದಾರೆ. ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕೇವಲ 45 ನಿಮಿಷಗಳ ಅಚ್ಚುಕಟ್ಟಾದ ಸಭಾ ಕಾರ್ಯಕ್ರಮದ ಆನಂತರ, ಇಡೀ ವೇದಿಕೆ ಸಾಂಸ್ಕೃತಿಕ ಪ್ರದರ್ಶನಗಳಿಗೆ ಸಾಕ್ಷಿಯಾಗಲಿದೆ.

500 ವಿದ್ಯಾರ್ಥಿಗಳಿಂದ ಕಲಾ ವೈವಿಧ್ಯದ ಅನಾವರಣ
ಈ ಬಾರಿಯ ವಿಶೇಷವೆಂದರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸುಮಾರು 500ಕ್ಕೂ ಅಧಿಕ ವಿದ್ಯಾರ್ಥಿ ಕಲಾವಿದರು ಒಂದೇ ವೇದಿಕೆಯಲ್ಲಿ ವಿವಿಧ ಕಲಾ ಪ್ರಕಾರಗಳನ್ನು ಪ್ರದರ್ಶಿಸಲಿದ್ದಾರೆ. ಯೋಗದ ಪಾವಿತ್ರ್ಯವನ್ನು ಸಾರುವ ʻಯೋಗ ದೀಪಿಕಾ’ ಹಾಗೂ ಶಾಸ್ತ್ರೀಯ ನೃತ್ಯದ ʻಅಷ್ಟಲಕ್ಷ್ಮಿ’ ಪ್ರದರ್ಶನಗಳು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಲಿವೆ. ಭಾರತದ ವೈವಿಧ್ಯತೆಯನ್ನು ಬಿಂಬಿಸುವ ಗುಜರಾತಿನ ದಾಂಡಿಯಾ, ಮಣಿಪುರಿ ಸ್ಟಿಕ್ ಡಾನ್ಸ್, ಪಶ್ಚಿಮ ಬಂಗಾಳದ ಪುರುಲಿಯಾ ಸಿಂಹ ನೃತ್ಯ ಹಾಗೂ ಕಥಕ್ ನೃತ್ಯದ ‘ವರ್ಷಧಾರೆ’ ಕಾರ್ಯಕ್ರಮದ ಮುಖ್ಯ ಆಕರ್ಷಣೆಗಳಾಗಿವೆ ಎಂದು ಮೋಹನ್‌ ಆಳ್ವಾ ತಿಳಿಸಿದರು.

ಯಕ್ಷಗಾನ ಮತ್ತು ಸಾಹಸ ಕಲೆಗಳ ಸಂಗಮ
ಕರಾವಳಿಯ ಗಂಡುಕಲೆ ಯಕ್ಷಗಾನಕ್ಕೆ ಈ ಕಾರ್ಯಕ್ರಮದಲ್ಲಿ ವಿಶೇಷ ಪ್ರಾಶಸ್ತ್ಯ ನೀಡಲಾಗಿದೆ. ಬಡಗುತಿಟ್ಟಿನ ʻಶಂಕರಾಭರಣ ಶೋಭಾನೆ’ ಮತ್ತು ತೆಂಕುತಿಟ್ಟಿನ ‘ಹಿರಣ್ಯಾಕ್ಷ ವಧೆ’ ಪ್ರಸಂಗಗಳು ಕಲಾಭಿಮಾನಿಗಳಿಗೆ ರಸದೌತಣ ನೀಡಲಿವೆ. ಇದರೊಂದಿಗೆ ಮಲ್ಲಕಂಬದ ರೋಮಾಂಚಕ ಕಸರತ್ತುಗಳು, ಸೃಜನಾತ್ಮಕ ನೃತ್ಯಗಳು, ಲಯಬದ್ಧ ಡೊಳ್ಳು ಕುಣಿತ ಹಾಗೂ ಮಕ್ಕಳನ್ನು ರಂಜಿಸಲು ʻಬೊಂಬೆ ವಿನೋದಾವಳಿ’ ಪ್ರದರ್ಶನಗಳು ಸಾಂಸ್ಕೃತಿಕ ವೈಭವದ ಮೆರುಗನ್ನು ಹೆಚ್ಚಿಸಲಿವೆ ಎಂದು ಅವರು ವಿವರಿಸಿದರು.

8,000 ಪ್ರೇಕ್ಷಕರಿಗೆ ವ್ಯವಸ್ಥೆ; ಉಚಿತ ಪ್ರವೇಶ
ಸಾಂಸ್ಕೃತಿಕ ಕಾರ್ಯಕ್ರಮದ ಯಶಸ್ಸಿಗಾಗಿ ಕರಾವಳಿ ಉತ್ಸವ ಮೈದಾನದಲ್ಲಿ ಬೃಹತ್ ವೇದಿಕೆ ನಿರ್ಮಿಸಲಾಗುತ್ತಿದ್ದು, 8,000ಕ್ಕೂ ಅಧಿಕ ಪ್ರೇಕ್ಷಕರಿಗೆ ಕುಳಿತು ವೀಕ್ಷಿಸಲು ಆಸನದ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರಿಗೆ ಯಾವುದೇ ಶುಲ್ಕವಿಲ್ಲದೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಕಾರ್ಯಕ್ರಮವು ನಿಗದಿತ ಸಮಯಕ್ಕೆ ಸರಿಯಾಗಿ ಆರಂಭವಾಗಿ, ಅಷ್ಟೇ ಶಿಸ್ತಿನಿಂದ ಮುಕ್ತಾಯಗೊಳ್ಳಲಿದೆ. ಈ ಮೂಲಕ ಮಂಗಳೂರಿನ ಜನತೆಗೆ ಒಂದು ಪರಿಪೂರ್ಣ ಸಾಂಸ್ಕೃತಿಕ ಸಂಜೆ ಉಣಬಡಿಸಲು ಆಳ್ವಾಸ್ ಸಂಸ್ಥೆ ಸಜ್ಜಾಗಿದೆ ಎಂದರು.

ಸ್ವಸ್ಥ ಸಮಾಜದ ನಿರ್ಮಾಣದ ಕನಸು
“ಆಳ್ವಾಸ್ ಸಾಂಸ್ಕೃತಿಕ ವೈಭವವು ಕೇವಲ ಒಂದು ಮನೋರಂಜನಾ ಕಾರ್ಯಕ್ರಮವಲ್ಲ; ಇದು ನಮ್ಮ ದೇಶದ ವೈವಿಧ್ಯಮಯ ಪರಂಪರೆ ಮತ್ತು ಸಂಸ್ಕೃತಿಯನ್ನು ಯುವ ಪೀಳಿಗೆಗೆ ಪರಿಚಯಿಸುವ ಒಂದು ಪ್ರಯತ್ನ. ಈ ಕಲಾ ಸೌಂದರ್ಯವನ್ನು ಕಣ್ಣುಂಬಿಸಿಕೊಳ್ಳುವ ಮೂಲಕ ಸಮಾಜಕ್ಕೆ ಸಕಾರಾತ್ಮಕ ಸಂದೇಶ ರವಾನೆಯಾಗಿ, ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯವಿದೆ” ಎಂದು ಡಾ. ಎಂ. ಮೋಹನ್‌ ಆಳ್ವಾ ಆಶಯ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಪ್ರದೀಪ್ ಕುಮಾರ್ ಕಲ್ಕೂರ, ಪ್ರಸಾದ್ ಕಲ್ಲಿಮಾರ್, ಲೀಲಾಕ್ಷ ಕರ್ಕೇರ ಹಾಗೂ ಶಶಿರಾಜ್ ರಾವ್ ಕಾವೂರು ಉಪಸ್ಥಿತರಿದ್ದರು.

error: Content is protected !!