ಪೋಷಕರೇ ಮಗನ ಅಂಕಪಟ್ಟಿಯನ್ನು ನಿಮ್ಮ ಪ್ರತಿಷ್ಠೆಯ ʻಟ್ರೋಫಿ’ ಮಾಡಿಕೊಳ್ಳಬೇಡಿ!

ಪೋಷಕರೇ ಇವತ್ತಿನಿಂದ ನಿಮ್ಮ ಮಗ ಅಥವಾ ಮಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯೋಕೆ ಹೋಗ್ತಿದ್ದಾರೆ. ಬೆಳಗ್ಗೆಯಿಂದ ನೀವು ದೇವಸ್ಥಾನಕ್ಕೆ ಅಲೆದಾಡುತ್ತಿರಬಹುದು, ಮನೆಯಲ್ಲಿ ಒಂದು ರೀತಿಯ ತುರ್ತು ಪರಿಸ್ಥಿತಿ ತಂದಿಟ್ಟಿರಬಹುದು.

ಆದರೆ ನೆನಪಿಟ್ಟುಕೊಳ್ಳಿ, ಆ ಮಗು ಹೋಗ್ತಿರೋದು ಯುದ್ಧಕ್ಕಲ್ಲ, ಕೇವಲ ಒಂದು ಪರೀಕ್ಷೆಗೆ. ಈ ಎಸ್‌ಎಸ್‌ಎಲ್‌ಸಿ ಪರೀಕ್ಷೆಯೆಂಬುದು ಬದುಕಿನ ಮಹಾದ್ವಾರವೇ ಹೊರತು, ಅದು ಬದುಕಿನ ‘ಅಂತಿಮ’ ತೀರ್ಪಲ್ಲ! ಪರೀಕ್ಷೆಯಲ್ಲಿ ‌ ಪಡೆಯುವ ಅಂಕಗಳು ಕೇವಲ ಒಂದು ಕಾಗದದ ಮೇಲೆ ಬರೆಯುವ ಅಂಕಿಗಳು ಅಷ್ಟೇ. 90 ತಗೊಂಡರೂ, ಅಥವಾ ದಂಡಿಯಾಗಿ ಓದಿಯೂ 40 ತಗೊಂಡರೂ ಮನುಷ್ಯತ್ವಕ್ಕೆ ಆ ಅಂಕಗಳು ಬೆಲೆ ಕಟ್ಟಲಾರವು.

ಈ ಲೋಕದಲ್ಲಿ ದೊಡ್ಡ ದೊಡ್ಡ ಸಾಧನೆ ಮಾಡಿದವರೆಲ್ಲಾ ಸ್ಕೂಲಿನಲ್ಲಿ ಫಸ್ಟು ಬಂದವರಲ್ಲ. ಯಾರು ಸೋಲನ್ನ ನಗುನಗುತ್ತಾ ಸ್ವೀಕರಿಸಿದರೋ, ಅವರು ಮಾತ್ರ ಇವತ್ತು ಜಗತ್ತನ್ನ ಆಳುತ್ತಿದ್ದಾರೆ. ಸೋಲು ಅಂದ್ರೆ ಅದು ಅಂತ್ಯವಲ್ಲ, ಅದು ಗೆಲುವಿನ ಕಡೆಗೆ ಇಡುವ ಮೊದಲ ಹೆಜ್ಜೆ. ಒಂದು ವೇಳೆ ಈ ಬಾರಿ ಮಗನಿಗೆ ಪಾಸಾಗಲು ಸಾಧ್ಯವಾಗದಿದ್ದರೂ ಪರವಾಗಿಲ್ಲ. ಭೂಮಿ ಕುಸಿಯಲ್ಲ, ಆಕಾಶ ತಲೆ ಮೇಲೆ ಬೀಳಲ್ಲ. ಒಂದು ಪರೀಕ್ಷೆಯಲ್ಲಿ ಫೇಲಾದ ಮಾತ್ರಕ್ಕೆ ಬದುಕಿನಲ್ಲೇ ಫೇಲಾದ ಅಂತ ಅಂದುಕೊಳ್ಳುವುದು ದಡ್ಡತನ. ಬೇಕಾದಷ್ಟು ಅವಕಾಶಗಳು ಕಾದು ಕುಳಿತಿವೆ.

ಅವನನ್ನ ಇನ್ನೊಬ್ಬರ ಜೊತೆ ಹೋಲಿಸಬೇಡಿ!
ಪಕ್ಕದ ಮನೆಯ ಹುಡುಗ 95 ತಗೋತಾನೆ, ನಿಮ್ಮ ಮಗ ಯಾಕೆ 60 ತಗೋತಾನೆ ಅಂತ ಕೇಳುವ ಹಕ್ಕು ನಿಮಗಿಲ್ಲ. ಪ್ರತಿಯೊಂದು ಮಗುವೂ ಒಂದೊಂದು ಅದ್ಭುತ. ಒಬ್ಬನಿಗೆ ಲೆಕ್ಕ ಚೆನ್ನಾಗಿ ಬರಬಹುದು, ಇನ್ನೊಬ್ಬನಿಗೆ ಹಾಡು ಚೆನ್ನಾಗಿ ಬರಬಹುದು. ನಿಮ್ಮ ಮಗನ ಮಾರ್ಕ್ಸ್ ಕಾರ್ಡ್ ಅನ್ನು ಸಮಾಜದಲ್ಲಿ ನಿಮ್ಮ ಗೌರವ ತೋರಿಸೋ ʻಟ್ರೋಫಿ’ ತರ ಬಳಸಬೇಡಿ. ಅವನ ಅಂಕಗಳು ಕಡಿಮೆ ಬಂದ್ರೆ ನಿಮ್ಮ ಮರ್ಯಾದೆ ಹೋಗಲ್ಲ, ಆದರೆ ನೀವು ಅವನನ್ನ ಹೀಯಾಳಿಸಿದರೆ ಅವನ ಮೇಲಿರೋ ನಿಮ್ಮ ʻಅಪ್ಪ-ಅಮ್ಮ’ ಅನ್ನೋ ಗೌರವ ಮಾತ್ರ ಖಂಡಿತ ಹೋಗುತ್ತೆ.

ಫೇಲಾದ್ರೆ ಬೆನ್ನಿಗೆ ನಿಲ್ಲಿ, ಬೆನ್ನಿಗೆ ಚೂರಿ ಹಾಕಬೇಡಿ!
ಒಂದು ವೇಳೆ ರಿಸಲ್ಟ್ ಬಂದಾಗ ಅವನು ಪಾಸಾಗದಿದ್ದರೆ, ದಯವಿಟ್ಟು ಅವನನ್ನ ಮನೆಯಿಂದ ಹೊರಹಾಕೋ ಮಾತಾಡಬೇಡಿ ಅಥವಾ ಮೌನವಾಗಿ ಕೂತು ಅವನನ್ನ ಸಾಯಿಸಬೇಡಿ. ಅವನಿಗೆ ಆಗ ನಿಮ್ಮ ಅವಶ್ಯಕತೆ ತುಂಬಾ ಇರುತ್ತೆ. “ಪರವಾಗಿಲ್ಲ ಬಿಡು ಮಗಾ, ಇನ್ನೊಂದು ಚಾನ್ಸ್ ಇದೆ” ಅಂತ ಬೆನ್ನು ತಟ್ಟುವ ಒಂದು ಮಾತು ಅವನನ್ನ ಮುಂದೊಂದು ದಿನ ದೊಡ್ಡ ಮನುಷ್ಯನನ್ನಾಗಿ ಮಾಡುತ್ತೆ. ನೀವು ಅಂಕಗಳ ಬೆನ್ನತ್ತಿ ಅವನ ಪ್ರಾಣವನ್ನ ಅಥವಾ ಅವನ ಮುಗ್ಧ ನಗುವನ್ನ ಕಸಿದುಕೊಳ್ಳಬೇಡಿ.

ಮಗುವಿನ ಪ್ರಾಣ ಅಂಕಗಳಿಗಿಂತ ದೊಡ್ಡದು…
ಪೋಷಕರೇ ಪ್ರತಿ ವರ್ಷ ಎಷ್ಟೋ ಮಕ್ಕಳು ಕೇವಲ ನಿಮ್ಮ ಭಯಕ್ಕೆ, ನಿಮ್ಮ ನಿರೀಕ್ಷೆಗಳನ್ನು ತಲುಪಲಾಗದೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆ ಮಾರ್ಕ್ಸ್ ಕಾರ್ಡ್ ಎಂಬ ಕಾಗದದ ತುಣುಕು ನಿಮ್ಮ ಮಗನಿಗಿಂತ ದೊಡ್ಡದಲ್ಲ. ಅವನು ಪಾಸಾಗಲಿ, ಬಿಡಲಿ… ಅವನು ನಿಮ್ಮ ರಕ್ತ, ನಿಮ್ಮ ಜೀವ. ಅವನಿಗೆ ಧೈರ್ಯ ತುಂಬಿ ಕಳುಹಿಸಿಕೊಡಿ. ಅವನು ಸೋತಾಗಲೂ ನೀವು ಅವನ ಜೊತೆಗಿದ್ದೀರಿ ಅನ್ನೋ ಭರವಸೆ ಅವನಿಗೆ ಸಾವು-ಬದುಕಿನ ನಡುವಿನ ಗೋಡೆಯಾಗಲಿ.

error: Content is protected !!