ಹಾರ್ಮುಜ್ ಮೇಲೆ ಅಮೆರಿಕದಿಂದ ಭೀಖರ ಬಾಂಬ್‌ ದಾಳಿ: ಇನ್ನು ಹಡಗುಗಳ ಸಂಚಾರ ಸುಗಮವಾಗುತ್ತಾ?

ಟೆಹ್ರಾನ್: ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಹಾರ್ಮುಜ್ ಜಲಸಂಧಿಯ ಇರಾನ್ ಕರಾವಳಿಯ ಮೇಲೆ ನಿನ್ನೆ ರಾತ್ರಿ ಭೀಕರ ದಾಳಿ ನಡೆಸಿ‌ದೆ. ಅಮೆರಿಕದ ಅತ್ಯಂತ ಶಕ್ತಿಶಾಲಿ ʻGBU-72 ಅಡ್ವಾನ್ಸ್ಡ್ 5K ಪೆನೆಟ್ರೇಟರ್’ ಅಥವಾ ಬಂಕರ್ ಬಸ್ಟರ್ ಬಾಂಬ್‌ಗಳನ್ನು ಈ ಕಾರ್ಯಾಚರಣೆಯಲ್ಲಿ ಬಳಸಲಾಗಿದೆ. ವಿಶ್ವದ ಬೇರೆ ಬೇರೆ ರಾಷ್ಟ್ರಗಳ ಹಡಗುಗಳಿಗೆ ಇರಾನ್‌ ದಿಗ್ಬಂಧನ ವಿಧಿಸಿರುವುದನ್ನು ವಿರೋಧಿಸಿ ಬಾಂಬ್‌ ಉದುರಿಸಿದ್ದಾಗಿ ಅಮೆರಿಕಾ ಹೇಳಿಕೊಂಡಿದೆ.

ಇವು ಭೂಮಿಯ ಆಳದಲ್ಲಿ ಅಡಗಿಸಿಟ್ಟಿರುವ ಕ್ಷಿಪಣಿ ನೆಲೆಗಳನ್ನು ಮತ್ತು ಕಾಂಕ್ರೀಟ್ ಕೋಟೆಗಳನ್ನು ಭೇದಿಸಿ ಒಳಗೆ ಸ್ಫೋಟಗೊಳ್ಳುವ ಸಾಮರ್ಥ್ಯ ಹೊಂದಿದ್ದು, ಈ ದಾಳಿಯಿಂದಾಗಿ ಇರಾನ್‌ನ ಹಡಗು-ನಿರೋಧಕ ಕ್ಷಿಪಣಿ ವ್ಯವಸ್ಥೆಗಳು ಸಂಪೂರ್ಣವಾಗಿ ಧ್ವಂಸಗೊಂಡಿವೆ ಎಂದು ವರದಿಯಾಗಿದೆ. ದಾಳಿಯ ನಂತರ ಹಾರ್ಮುಜ್ ಜಲಸಂಧಿಯು ಈಗ ಸ್ಮಶಾನದಂತಾಗಿದೆ.

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯ ನಂತರ ಇರಾನ್ ಈ ಮಾರ್ಗವನ್ನು ಬಂದ್ ಮಾಡಿತ್ತು. ಉಪಗ್ರಹ ಚಿತ್ರಗಳ ಪ್ರಕಾರ, ನೂರಾರು ತೈಲ ಟ್ಯಾಂಕರ್‌ಗಳು ಜಲಸಂಧಿಯ ಹೊರಭಾಗದಲ್ಲಿ ದಾಳಿಯ ಭಯದಿಂದ ನಿಂತಿವೆ. ಈ ಸಂಘರ್ಷದಿಂದಾಗಿ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತಲ್ಲಣ ಉಂಟಾಗಿದ್ದು, ಬೆಲೆ ಪ್ರತಿ ಬ್ಯಾರೆಲ್‌ಗೆ $120 ದಾಟುವ ಭೀತಿ ಎದುರಾಗಿದೆ. ಅಮೆರಿಕವು ಸುಮಾರು 5,000 ಮರಿನ್ ಸೈನಿಕರನ್ನು ಈ ಭಾಗಕ್ಕೆ ರವಾನಿಸಿದ್ದು, ಭೂಸೇನೆಯ ಕಾರ್ಯಾಚರಣೆಗೂ ಸಿದ್ಧತೆ ನಡೆಸುತ್ತಿದೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಕಾರ್ಯಾಚರಣೆಯನ್ನು “ಸ್ವತಂತ್ರ ಕಾರ್ಯಾಚರಣೆ” ಎಂದು ಕರೆದಿದ್ದಾರೆ. NATO ಮಿತ್ರ ರಾಷ್ಟ್ರಗಳಾದ ಬ್ರಿಟನ್ ಮತ್ತು ಸ್ಪೇನ್ ಈ ಯುದ್ಧಕ್ಕೆ ಸಾಥ್ ನೀಡಲು ನಿರಾಕರಿಸಿವೆ. ಇದು ಅಮೆರಿಕದ ಒಳಗೂ ಅಸಮಾಧಾನಕ್ಕೆ ಕಾರಣವಾಗಿದೆ. ಪ್ರಮುಖವಾಗಿ, ರಾಷ್ಟ್ರೀಯ ಭಯೋತ್ಪಾದನಾ ನಿರೋಧಕ ಕೇಂದ್ರದ ನಿರ್ದೇಶಕ ಜೋ ಕೆಂಟ್ ಅವರು ಈ ಯುದ್ಧದ ಔಚಿತ್ಯವನ್ನು ಪ್ರಶ್ನಿಸಿ ರಾಜೀನಾಮೆ ನೀಡಿದ್ದು, “ಇರಾನ್‌ನಿಂದ ಯಾವುದೇ ನೇರ ಬೆದರಿಕೆ ಇರಲಿಲ್ಲ” ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಒಂದೆಡೆ ಅಮೆರಿಕದ ದಾಳಿ ನಡೆಯುತ್ತಿದ್ದರೆ, ಇತ್ತ ಇರಾನ್ ಬೆಂಬಲಿತ ಪಡೆಗಳು ಸೌದಿ ಅರೇಬಿಯಾ, ಕುವೈತ್ ಮತ್ತು ಕತಾರ್ ಮೇಲೆ ಡ್ರೋನ್ ಹಾಗೂ ಕ್ಷಿಪಣಿ ದಾಳಿಗಳನ್ನು ನಡೆಸಿವೆ. ಇರಾನ್‌ನ ನೂತನ ನಾಯಕ ಮೊಜ್ತಾಬಾ ಖಮೇನಿ ಅವರನ್ನು ಗುರಿಯಾಗಿಸಲು ಇಸ್ರೇಲ್ ಸನ್ನದ್ಧವಾಗಿದೆ. ಒಟ್ಟಾರೆಯಾಗಿ, ಹಾರ್ಮುಜ್ ಜಲಸಂಧಿಯು ಕೇವಲ ಒಂದು ಜಲಮಾರ್ಗವಾಗಿ ಉಳಿಯದೆ, ಮೂರನೇ ಮಹಾಯುದ್ಧದ ಆರಂಭಿಕ ತಾಣದಂತೆ ಭಾಸವಾಗುತ್ತಿದೆ.

error: Content is protected !!