ಸುರತ್ಕಲ್: ಮಾರ್ಚ್ 21ರಂದು ಅಗರಿ ಸಂಸ್ಮರಣೆ – ಪ್ರಶಸ್ತಿ ಪ್ರದಾನ ಸಮಾರಂಭ

ಸುರತ್ಕಲ್: ಗೋವಿಂದ ದಾಸ ಕಾಲೇಜು ಹಾಗೂ ಅಗರಿ ಶ್ರೀನಿವಾಸ ಭಾಗವತರ ಸಂಸ್ಮರಣಾ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ಮಾರ್ಚ್ 21ರಂದು ಶನಿವಾರ “ಯಕ್ಷಯಾನ” ಅಗರಿ ಸಂಸ್ಮರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಗರಿ ರಾಘವೇಂದ್ರ ರಾವ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಸುರತ್ಕಲ್‌ನ ಗೋವಿಂದ ದಾಸ ಕಾಲೇಜಿನ ಆವರಣದಲ್ಲಿ ನಡೆಯಲಿರುವ ಈ ಸಂಭ್ರಮದ ಅಂಗವಾಗಿ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ ಕಾಲೇಜು ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಉದ್ಘಾಟನಾ ಸಮಾರಂಭ:
ಪೂರ್ವಾಹ್ನ 8:30ಕ್ಕೆ ‘ಯಕ್ಷಕೇಸರಿ ಅಗರಿ ರಘುರಾಮ ಭಾಗವತ ವೇದಿಕೆ’ಯಲ್ಲಿ ಸ್ಪರ್ಧೆಗಳಿಗೆ ಚಾಲನೆ ದೊರೆಯಲಿದೆ. ಕಟ್ಲ ಆರ್ಯ ಫಯರ್ ಆ್ಯಂಡ್ ಸೇಫ್ಟಿ ಮಾಲಕರಾದ ಶ್ರೀ ರಘುನಾಥ ಶೆಟ್ಟಿ ಕೃಷ್ಣಾಪುರ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಪ್ರಾಂಶುಪಾಲರಾದ ಪ್ರೊ. ಹರೀಶ ಆಚಾರ್ಯ ಪಿ. ಅಧ್ಯಕ್ಷತೆ ವಹಿಸಲಿದ್ದಾರೆ. ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ  ಶಕುಂತಳ ರಮಾನಂದ ಭಟ್ ದೀಪ ಪ್ರಜ್ವಲನೆ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿಂದು ವಿದ್ಯಾದಾಯಿನೀ ಸಂಘದ ಕಾರ್ಯದರ್ಶಿ  ಶ್ರೀರಂಗ ಹೆಚ್ ಹಾಗೂ ಅಗರಿ ಎಂಟರ್ ಪ್ರೈಸಸ್ ಮಾಲಕ  ಅಗರಿ ರಾಘವೇಂದ್ರ ರಾವ್ ಉಪಸ್ಥಿತರಿರುವರು.

ಸ್ಪರ್ಧಾ ಕಣದಲ್ಲಿ ಪ್ರಮುಖ ತಂಡಗಳು:
ದಿನವಿಡೀ ನಡೆಯುವ ಈ ಸ್ಪರ್ಧೆಯಲ್ಲಿ ಜಿಲ್ಲೆಯ ಪ್ರತಿಷ್ಠಿತ ಕಾಲೇಜು ತಂಡಗಳು ಭಾಗವಹಿಸಲಿವೆ. ಬೆಳಿಗ್ಗೆ 9ರಿಂದ ಸ್ವಸ್ತಿಕ ನ್ಯಾಶನಲ್ ಬಿಸಿನೆಸ್ ಸ್ಕೂಲ್ ತಂಡದಿಂದ ‘ನರಕಾಸುರ ಮೋಕ್ಷ’, 10:15ಕ್ಕೆ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದಿಂದ ‘ಭೀಷ್ಮ ಪ್ರತಿಜ್ಞೆ’, 11:30ಕ್ಕೆ ಕಟೀಲು ದುರ್ಗಾಪರಮೇಶ್ವರಿ ಕಾಲೇಜಿನಿಂದ ‘ರತ್ನಾವತಿ ಕಲ್ಯಾಣ’ ಪ್ರದರ್ಶನಗೊಳ್ಳಲಿದೆ. ಮಧ್ಯಾಹ್ನ 1 ಗಂಟೆಗೆ ಮಂಗಳೂರು ವಿವಿ ಕಾಲೇಜಿನಿಂದ ‘ಬಬ್ರುವಾಹನ ಕಾಳಗ’, 2:15ಕ್ಕೆ ಉಜಿರೆ ಎಸ್.ಡಿ.ಎಮ್ ಕಾಲೇಜಿನಿಂದ ‘ತರಣಿಸೇನ ಕಾಳಗ’ ಹಾಗೂ 3 ಗಂಟೆಗೆ ಗೋವಿಂದ ದಾಸ ಕಾಲೇಜಿನಿಂದ ‘ಸುಧನ್ವ ಮೋಕ್ಷ’ ಪ್ರದರ್ಶನಗಳು ನಡೆಯಲಿವೆ.

ಪ್ರಶಸ್ತಿ ಪ್ರದಾನ ಹಾಗೂ ಸಮಾರೋಪ:
ಸಂಜೆ 4:40ಕ್ಕೆ ಸಮಾರೋಪ ಸಮಾರಂಭ ಜರುಗಲಿದ್ದು, ಕಟೀಲು ದೇವಳದ ಅರ್ಚಕರಾದ ವೇದಮೂರ್ತಿ ಶ್ರೀ ಕಮಲಾದೇವಿ ಪ್ರಸಾದ ಅಸ್ರಣ್ಣ ಉದ್ಘಾಟನೆ ನೆರವೇರಿಸಲಿದ್ದಾರೆ. ಮೂಡಬಿದ್ರೆಯ ಶ್ರೀ ಶ್ರೀಪತಿ ಭಟ್ ಅಧ್ಯಕ್ಷತೆ ವಹಿಸಲಿದ್ದು, ಶಾಸಕ ಡಾ. ವೈ. ಭರತ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಕಲ್ಲಾಡಿ ಶ್ರೀ ದೇವಿಪ್ರಸಾದ್ ಶೆಟ್ಟಿ ಅವರಿಗೆ 35,000 ರೂ. ನಗದು ಒಳಗೊಂಡ ‘ಅಗರಿ ಪ್ರಶಸ್ತಿ’ ಹಾಗೂ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನಕ್ಕೆ ‘ಅಗರಿ ರಘುರಾಮ ಭಾಗವತ ಪ್ರಶಸ್ತಿ’ (50 ಇಂಚ್ ಎಲ್.ಇ.ಡಿ ಟಿವಿ) ನೀಡಿ ಗೌರವಿಸಲಾಗುವುದು.

ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಪ್ರಾಂಶುಪಾಲ ಹರೀಶ್, ಗಂಗಾಧರ್, ಯಕ್ಷಗಾನ ಕಲಾವಿದೆ ಪೂರ್ಣಿಮಾ ಯತೀಶ್ ರೈ, ಪುಂಡಲೀಕ ಹೊಸಬೆಟ್ಟು, ಸಂಘಟನೆಯ ಉಪಾಧ್ಯಕ್ಷ ಪ್ರಕಾಶ್ ಹರೀಶ್ ಆಚಾರ್ಯ ಹಾಗೂ ಬಾಳ ಗಂಗಾಧರ್ ಪೂಜಾರಿ ಉಪಸ್ಥಿತರಿದ್ದರು.

error: Content is protected !!