ಬೆಂಗಳೂರು: ಧರ್ಮಸ್ಥಳ ತಲೆಬುರುಡೆ ಪ್ರಕರಣದಲ್ಲಿ ವಿದೇಶಿ ಫಂಡಿಂಗ್ ಹಾಗೂ ಷಡ್ಯಂತ್ರದ ಆರೋಪಗಳ ಹಿನ್ನಲೆಯಲ್ಲಿ ಜಾರಿ ನಿರ್ದೇಶನಾಲಯ (ED) ತನಿಖೆ ಕೈಗೆತ್ತಿಕೊಳ್ಳಲು ಸೂಚನೆ ದೊರೆತಿದೆ. ಸ್ಥಳೀಯ ಪೊಲೀಸರು ಸಲ್ಲಿಸಿರುವ ದಾಖಲೆಗಳ ಆಧಾರದ ಮೇಲೆ ಇಡಿ ಪ್ರತ್ಯೇಕ ಎಫ್‌ಐಆರ್ ದಾಖಲಿಸುವ ಸಿದ್ಧತೆಯಲ್ಲಿದೆ.
ಫಾರಿನ್ ಎಕ್ಸ್‌ಚೇಂಜ್ ಮ್ಯಾನೇಜ್ಮೆಂಟ್ ಆಕ್ಟ್ (FEMA) ಅಡಿ ಇಡಿ ಕೇಸು ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸಲಿದೆ. ‘ಒಡನಾಡಿ’ ಮತ್ತು ‘ಸಂವಾದ’ ಎನ್ನುವ ಎರಡು ಎನ್‌ಜಿಒಗಳ ಚಟುವಟಿಕೆಗಳ ಬಗ್ಗೆ ಹೆಚ್ಚಿನ ಪರಿಶೀಲನೆ ನಡೆಯಲಿದ್ದು, ವಿದೇಶದಿಂದ ಅಕ್ರಮವಾಗಿ ಹಣಕಾಸು ನೆರವು ಪಡೆದು ಧರ್ಮಸ್ಥಳ ವಿರುದ್ಧ ಅಪಪ್ರಚಾರ ಹಾಗೂ ಷಡ್ಯಂತ್ರ ನಡೆಸಿದ್ದಾರೆಂಬ ಆರೋಪ ತನಿಖೆಯ ಕೇಂದ್ರಬಿಂದುವಾಗಿದೆ.
ಇಂಡಿಯಾ ಟುಡೇ ವರದಿ ಪ್ರಕಾರ, ಕಳೆದ ಐದು ವರ್ಷಗಳ ಬ್ಯಾಂಕ್ ವಹಿವಾಟು, ಪಾನ್ ಕಾರ್ಡ್ ವಿವರಗಳು ಹಾಗೂ ಇನ್ನಿತರ ಹಣಕಾಸು ದಾಖಲೆಗಳನ್ನು ಒದಗಿಸುವಂತೆ ಇಡಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಪತ್ರ ಬರೆದಿದೆ.
ದೂರು ಆಧಾರದಲ್ಲಿ ಚಟುವಟಿಕೆ
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿದೇಶಿ ಫಂಡಿಂಗ್ ಮೂಲಕ ಹಿಂದೂ ಶ್ರದ್ಧಾಕೇಂದ್ರಗಳನ್ನು ಗುರಿಯಾಗಿಸಲಾಗಿದೆ ಎಂಬ ಬಿಜೆಪಿ ನಾಯಕರ ಆರೋಪಗಳು ಮುಂದುವರೆದಿವೆ. ಇದೇ ವೇಳೆ, ಬೆಂಗಳೂರು ಮೂಲದ ಸುರೇಶ್ ಗೌಡ ಇಡಿ ಕಚೇರಿಗೆ ದೂರು ಸಲ್ಲಿಸಿ, ತನಿಖೆ ನಡೆಸುವಂತೆ ಆಗ್ರಹಿಸಿದ್ದರು. ನಕಲಿ ಮಾನವ ಹಕ್ಕು ಆಯೋಗದ ಚಟುವಟಿಕೆಗಳ ಬಗ್ಗೆ ಸಹ ಸುರೇಶ್ ಅವರು ರಾಜ್ಯ ಮಾನವ ಹಕ್ಕು ಆಯೋಗಕ್ಕೂ ದೂರು ನೀಡಿದ್ದಾರೆಂದು ತಿಳಿದುಬಂದಿದೆ.