ಮಂಗಳೂರು ವಿಮಾನ ನಿಲ್ದಾಣದಲ್ಲಿ ಚಿನ್ನಾಭರಣ ಕಳವು ಪ್ರಕರಣ: ಐವರು ಬಂಧನ

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿ ಐವರು ಬಂಧಿತರಾಗಿದ್ದು, ಸುಮಾರು ಐದು ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆಗಸ್ಟ್ 30ರಂದು ಬೆಂಗಳೂರಿನಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಮಂಗಳೂರು ತಲುಪಿದ ಮಹಿಳಾ ಪ್ರಯಾಣಿಕರೊಬ್ಬರ ಬ್ಯಾಗೇಜ್‌ನಿಂದ 56 ಗ್ರಾಂ (ಅಂದಾಜು ಮೌಲ್ಯ ರೂ. 4.5 ಲಕ್ಷ) ಚಿನ್ನಾಭರಣ ಕಳವಾಗಿದ್ದಿತು. ದೂರು ಸ್ವೀಕರಿಸಿದ ಬಜಪೆ ಠಾಣೆ ಪೊಲೀಸರು ಕಲಂ 303(2) ಬಿ.ಎನ್.ಎಸ್ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡರು.

ತನಿಖೆಯಲ್ಲಿ ಏರ್ ಇಂಡಿಯಾ SATS ಸಂಸ್ಥೆಯಲ್ಲಿ ಲೋಡರ್ ಹಾಗೂ ಅನ್‌ಲೋಡರ್ ಆಗಿ ಕೆಲಸ ಮಾಡುತ್ತಿದ್ದ ಕಂದಾವರದ ನಿತಿನ್, ಮೂಡುಪೆರಾರದ ಸದಾನಂದ ಮತ್ತು ರಾಜೇಶ್, ಬಜಪೆಯ ಪ್ರವೀಣ್ ಫೆರ್ನಾಂಡಿಸ್ ಸೇರಿ ನಾಲ್ವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಅವರು ಕಳವು ಮಾಡಿದುದಾಗಿ ಒಪ್ಪಿಕೊಂಡಿದ್ದಾರೆ. ಆರೋಪಿತರು ಚಿನ್ನಾಭರಣವನ್ನು ಮೂಡುಪೆರಾರದ ರವಿರಾಜ್‌ಗೆ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದ್ದು, ಆರೋಪಿಯಿಂದ 50 ಗ್ರಾಂ ಚಿನ್ನದ ಗಟ್ಟಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ರವಿರಾಜ್ ವಿರುದ್ಧವೂ ಕಳವು ಮಾಲು ಸ್ವೀಕರಿಸಿದ ಆರೋಪದಡಿ ಪ್ರಕರಣ ದಾಖಲಾಗಿದೆ.

ಪೊಲೀಸರು ನಡೆಸಿದ ವಿಚಾರಣೆಯಲ್ಲಿ, ಇದೇ ತಂಡವು 2025ರ ಜನವರಿಯಲ್ಲಿ ಪ್ರಯಾಣಿಕ ಮನೋಹರ್ ಶೆಟ್ಟಿ ಅವರ ಬ್ಯಾಗಿನಿಂದ ರೂ. 2 ಲಕ್ಷ ನಗದು ಕಳವು ಮಾಡಿದ ಪ್ರಕರಣದಲ್ಲೂ ಭಾಗಿಯಾಗಿರುವುದು ಬಹಿರಂಗವಾಗಿದೆ. ಈ ಪ್ರಕರಣವೂ ಈಗಾಗಲೇ ತನಿಖೆಯ ಹಂತದಲ್ಲಿದೆ.

ಆರೋಪಿಗಳು ಸುಮಾರು ಒಂಬತ್ತು ವರ್ಷಗಳಿಂದ ಏರ್ ಇಂಡಿಯಾ SATS ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಬ್ಯಾಗೇಜ್ ಲಾಕ್‌ಗಳನ್ನು ಬಲವಂತವಾಗಿ ತೆರೆದು ಅಥವಾ ಸುಲಭ ಪಾಸ್‌ವರ್ಡ್ ಪ್ರಯತ್ನಿಸಿ ಕಳವು ನಡೆಸುತ್ತಿದ್ದರೆಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.

ಬಂಧಿತ ಐವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ ಪೊಲೀಸ್ ವಶಕ್ಕೆ ಪಡೆಯಲಾಗಿದೆ. ಪ್ರಯಾಣಿಕರು ಬೆಲೆಬಾಳುವ ವಸ್ತುಗಳನ್ನು ಬ್ಯಾಗೇಜ್‌ನಲ್ಲಿ ಇರಿಸುವ ಬದಲು ಸ್ವಯಂ ಮುತುವರ್ಜಿಯಲ್ಲಿ ಸಾಗಿಸುವಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

error: Content is protected !!