ಕಾಬೂಲ್: ಪಾಕಿಸ್ತಾನ ಗಡಿಭಾಗದ ಪರ್ವತ ಪ್ರದೇಶಗಳನ್ನು ಕೇಂದ್ರವಾಗಿಸಿಕೊಂಡು ಭಾನುವಾರ ರಾತ್ರಿ ಸಂಭವಿಸಿದ ಭೀಕರ ಭೂಕಂಪ ಅಫಘಾನಿಸ್ತಾನವನ್ನು ನಡುಗಿಸಿದೆ. 6.0 ತೀವ್ರತೆಯ ಈ ಕಂಪನದಲ್ಲಿ 1,400 ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದು, 3,000 ಕ್ಕಿಂತಲೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ಸರ್ಕಾರ ಅಧಿಕೃತವಾಗಿ ಪ್ರಕಟಿಸಿದೆ.
ಕುನರ್ ಪ್ರಾಂತ್ಯವೇ ಅತೀ ಹೆಚ್ಚು ಹಾನಿಗೊಳಗಾಗಿದ್ದು, ಅಲ್ಲಿ 1,411 ಮಂದಿ ಮೃತಪಟ್ಟಿದ್ದು 3,124 ಮಂದಿ ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ಸರ್ಕಾರದ ವಕ್ತಾರ ಜಬಿಹುಲ್ಲಾ ಮುಜಾಹಿದ್ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದರು. ಪಕ್ಕದ ನಂಗರ್‌ಹಾರ್‌ನಲ್ಲಿ ಸಹ ಡಜನ್ ಜನರು ಮೃತಪಟ್ಟಿದ್ದು ನೂರಾರು ಮಂದಿ ಗಾಯಗೊಂಡಿದ್ದಾರೆ.
ರಕ್ಷಣಾ ಕಾರ್ಯಾಚರಣೆಗಳು ಮುಂದುವರಿಕೆ
ಸ್ಥಳೀಯ ಆಡಳಿತದ ಪ್ರಕಾರ, ಅನೇಕ ದೂರದ ಹಳ್ಳಿಗಳಲ್ಲಿರುವ ಗಾಯಾಳುಗಳು ಇನ್ನೂ ಆಸ್ಪತ್ರೆಗೆ ಸಾಗಿಸಬೇಕಾಗಿದೆ. ಗ್ರಾಮಸ್ಥರೇ ಕೈಯಾರೆ ಮಣ್ಣು, ಕಲ್ಲಿನ ಮನೆಯನ್ನು ತೆರವುಗೊಳಿಸಿ ಬದುಕುಳಿದವರನ್ನು ಹುಡುಕುತ್ತಿದ್ದಾರೆ. ಯುಎನ್ ಮಾನವೀಯ ಸಹಾಯ ಸಂಸ್ಥೆಗಳ ಪ್ರಕಾರ, ಹಲವಾರು ಹಳ್ಳಿಗಳ ದಾರಿಗಳು ಮುಚ್ಚಿಹೋಗಿರುವುದರಿಂದ ಅಲ್ಲಿ ತಲುಪುವುದು ಅಸಾಧ್ಯವಾಗಿದೆ.
ಒಬ್ಬ ಗ್ರಾಮಸ್ಥ, 26 ವರ್ಷದ ಒಬೈದುಲ್ಲಾ ಸ್ಟೋಮಾನ್ ತಮ್ಮ ಸ್ನೇಹಿತನನ್ನು ಹುಡುಕಲು ವಾದೀರ್ ಗ್ರಾಮಕ್ಕೆ ತೆರಳಿದ್ದರು. “ಇಲ್ಲಿ ಬಂದು ನೋಡಿದಾಗ ಇಲ್ಲಿನ ಸ್ಥಿತಿಗೆ ಬೆಚ್ಚಿ ಬಿದ್ದಿದ್ದೇನೆ. ಎಲ್ಲೆಡೆ ಕೇವಲ ಅವಶೇಷಗಳು ಮಾತ್ರ ಉಳಿದಿವೆ” ಎಂದು ಅವರು ಕಣ್ಣೀರಿನಲ್ಲಿ ಹೇಳಿದರು.
ಮೃತದೇಹಗಳನ್ನು ಗ್ರಾಮಸ್ಥರು ಬಿಳಿ ವಸ್ತ್ರದಲ್ಲಿ ಮುಚ್ಚಿ ಪ್ರಾರ್ಥನೆ ನಡೆಸಿ ಸಮಾಧಿ ಮಾಡುತ್ತಿದ್ದಾರೆ. ಹಲವಾರು ಕುಟುಂಬಗಳು ಸಂಪೂರ್ಣವಾಗಿ ನಾಶವಾಗಿವೆ.
ಅಸಹಾಯಕ ಅಫಘಾನಿಸ್ತಾನ
ಭೂಕಂಪ ಕೇಂದ್ರ ಜಲಾಲಾಬಾದ್‌ನಿಂದ 27 ಕಿ.ಮೀ. ದೂರದಲ್ಲಿದ್ದು, ಕೇವಲ ಎಂಟು ಕಿ.ಮೀ. ಆಳದಲ್ಲಿ ಸಂಭವಿಸಿದೆ. ಇಂತಹ ಅಲ್ಪ ಆಳದ ಕಂಪನಗಳು ಹೆಚ್ಚು ಹಾನಿ ಉಂಟುಮಾಡುತ್ತವೆ. ವಿಶೇಷವಾಗಿ, ಅಫಘಾನಿಸ್ತಾನದ ಬಹುತೇಕ ಜನರು ಮಣ್ಣು–ಇಟ್ಟಿಗೆಯ ಮನೆಗಳಲ್ಲಿ ವಾಸಿಸುತ್ತಿರುವುದರಿಂದ ಅಪಾಯ ಹೆಚ್ಚಾಗಲು ಕಾರಣ.
ಯುದ್ಧ, ಬಡತನ, ನಿರಂತರ ಅಕ್ರಮ ನುಸುಳುಕೋರರಿಂದ ಸಮಸ್ಯೆ ಎದುರಿಸುತ್ತಿರುವ ಹಿನ್ನಲೆಯಲ್ಲಿ ದೇಶವೇ ಆರ್ಥಿಕ ಸಂಕಷ್ಟದಲ್ಲಿ ಮುಳುಗಿರುವಾಗ ಈ ಭೂಕಂಪ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ. ತಂದಿದೆ. 2021 ರಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ವಿದೇಶಿ ನೆರವು ಕಡಿತಗೊಂಡಿದ್ದು, ಅಮೆರಿಕಾ 2025 ರ ಆರಂಭದಲ್ಲಿ ನೆರವು ಸಂಪೂರ್ಣ ಸ್ಥಗಿತಗೊಳಿಸಿದೆ. ಇತ್ತ, ಜಾಗತಿಕ ನಿಧಿ ಕೊರತೆಯಿಂದಾಗಿ ಯುನೈಟೆಡ್ ನೇಶನ್ಸ್ ತನ್ನ ಮಾನವೀಯ ಯೋಜನೆಗಳನ್ನು ತೀವ್ರವಾಗಿ ಕಡಿತಗೊಳಿಸಿದೆ.
ಯುಎನ್ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರಸ್ ತುರ್ತು ನೆರವಿಗಾಗಿ ಪ್ರಾರಂಭಿಕವಾಗಿ ಐದು ಮಿಲಿಯನ್ ಡಾಲರ್ ಬಿಡುಗಡೆ ಮಾಡುವುದಾಗಿ ಘೋಷಿಸಿ, “ಅಫಘಾನಿಸ್ತಾನದ ತುರ್ತು ಅವಶ್ಯಕತೆಗಳನ್ನು ಗುರುತಿಸಿ ಸಹಾಯ ಒದಗಿಸಲಾಗುವುದು” ಎಂದಿದ್ದಾರೆ.
ಹಿಂದಿನ ಭೂಕಂಪಗಳ ನೆನಪು
ಅಫಘಾನಿಸ್ತಾನವು ಭೂಕಂಪನ ಪ್ರಭಾವಿತ ಪ್ರದೇಶವಾಗಿದ್ದು ಹಿಂದೂ ಕುಶ್ ಪರ್ವತಶ್ರೇಣಿಯಲ್ಲಿ ನಿರಂತರ ಭೂಕಂಪನಗಳು ಸಂಭವಿಸುತ್ತವೆ. 2023ರ ಅಕ್ಟೋಬರ್‌ನಲ್ಲಿ ಹೆರಾತ್ ಪ್ರಾಂತ್ಯದಲ್ಲಿ 6.3 ತೀವ್ರತೆಯ ಕಂಪನ ಸಂಭವಿಸಿ 1,500 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. 2022ರ ಜೂನ್‌ನಲ್ಲಿ ಪಕ್ತಿಕಾ ಪ್ರಾಂತ್ಯದಲ್ಲಿ 5.9 ತೀವ್ರತೆಯ ಕಂಪನದಿಂದ 1,000 ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದರು.