ಮೈಸೂರು: ಧರ್ಮಸ್ಥಳ ಹಾಗೂ ಸೌಜನ್ಯ ಪ್ರಕರಣವನ್ನು ಬಿಜೆಪಿ ರಾಜಕೀಯಗೊಳಿಸಿದೆ. ಇಷ್ಟೆಲ್ಲ ಹೋರಾಟ ನಡೆಸಲು ಬಿಜೆಪಿಯವರಿಗೆ ಹೊರದೇಶದಿಂದ ಹಣ ಬಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ನಾಯಕರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಬಿಜೆಪಿ ನಾಯಕರು ಇಂದು ಧರ್ಮಸ್ಥಳ ಯಾತ್ರೆ ನಡೆಸುತ್ತಿದ್ದಾರೆ. ಆದರೆ ಇದುವರೆಗೆ ಏಕೆ ಮಾಡಲಿಲ್ಲ? ವೀರೇಂದ್ರ ಹೆಗ್ಗಡೆ ಸ್ವತಃ ಎಸ್ಐಟಿ ತನಿಖೆಯನ್ನು ಸ್ವಾಗತಿಸಿ ಸತ್ಯ ಹೊರಬರಲಿ ಎಂದು ಹೇಳಿದ್ದಾರೆ. ಸರ್ಕಾರ ಯಾವುದೇ ರೀತಿಯ ಹಸ್ತಕ್ಷೇಪ ಮಾಡುತ್ತಿಲ್ಲ. ಇಷ್ಟೆಲ್ಲ ಹೋರಾಟ ನಡೆಸಲು ಬಿಜೆಪಿ ಅವರಿಗೆ ದುಡ್ಡು ಎಲ್ಲಿಂದ ಬಂದಿದೆ? ಹೊರದೇಶದಿಂದ ಹಣ ಬಂದಿದೆ” ಎಂದು ಗಂಭೀರ ಆರೋಪ ಹೊರಿಸಿದರು.
ಸೌಜನ್ಯ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅವರು, “ಮರುತನಿಖೆ ನಡೆಸುವ ವಿಚಾರ ಸಿಬಿಐ ಕೈಯಲ್ಲಿದೆ. ಸುಪ್ರೀಂ ಕೋರ್ಟ್ ಮೊರೆ ಹೋಗುವುದು ಸೌಜನ್ಯ ಕುಟುಂಬದ ನಿರ್ಧಾರ. ಮಹಿಳೆಯೊಬ್ಬರ ಹೇಳಿಕೆ ವಿಚಾರದಲ್ಲಿ, ಕೋರ್ಟ್ ಹಾಗೂ ಸಿಬಿಐ ಮುಂದೆ ಏಕೆ ಹೇಳಲಿಲ್ಲ? ಸಾಕ್ಷಿ ಮುಚ್ಚಿಡುವುದು ಅಪರಾಧ. ಇದು ಸಂಪೂರ್ಣವಾಗಿ ಕುಟುಂಬದ ವಿಷಯ” ಎಂದು ಸ್ಪಷ್ಟನೆ ನೀಡಿದರು.
ಅಸೆಂಬ್ಲಿಯಲ್ಲಿ ಬಿಜೆಪಿ ನಾಯಕರು ಆರ್.ಅಶೋಕ್ ಮತ್ತು ಸುನಿಲ್ ಕುಮಾರ್ ನಡೆಸಿದ ಚರ್ಚೆಗಳ ಬಗ್ಗೆ ಅವರು, “ವಿಪಕ್ಷವು ಮಂಡಿಸಿದ ವಿಷಯಗಳು ವಾಸ್ತವಾಧಾರಿತವಲ್ಲ” ಎಂದು ತಿರಸ್ಕರಿಸಿದರು.
‘ಚಾಮುಂಡಿ ಬೆಟ್ಟ ಚಲೋ’ ಕರೆ ನೀಡಿದ ಬಿಜೆಪಿ ನಾಯಕರನ್ನು ಪ್ರಶ್ನಿಸಿದ ಅವರು, “ಅವರು ಹೋರಾಟ ಮಾಡಲಿ ಬಿಡಿ. ನಾನು ವಿರೋಧಿಸುವುದಿಲ್ಲ. ಆದರೆ, ಹಿಂದಿನ ದಿನಗಳಲ್ಲಿ ಮಿರ್ಜಾ ಇಸ್ಮಾಯಿಲ್ ಮಹಾರಾಜರೊಂದಿಗೆ ಅಂಬಾರಿ ಏರಿದಾಗ, ನಿಸಾರ್ ಅಹಮದ್ ಉದ್ಘಾಟನೆ ಮಾಡಿದಾಗ ಬಿಜೆಪಿ ನಾಯಕರು ಎಲ್ಲಿದ್ದರು? ಎಂದು ಪ್ರತಿಪ್ರಶ್ನೆ ಮಾಡಿದರು.
ಅರಿಶಿಣ–ಕುಂಕುಮ ವಿವಾದದ ಕುರಿತೂ ಮಾತನಾಡಿದ ಸಿಎಂ, “ಬಾನು ಮುಷ್ತಾಕ್ ಕನ್ನಡದ ಮೇಲೆ ಪ್ರೀತಿ, ಆಸಕ್ತಿ ಹೊಂದಿದ್ದರಿಂದಲೇ ಬರಹ ಬರೆದಿದ್ದಾರೆ. ಬೇರೆ ಧರ್ಮದವರು ಅರಿಶಿಣ–ಕುಂಕುಮ ಹಾಕಿಕೊಳ್ಳಿ ಎಂದರೆ ಅದು ಅವರ ಧಾರ್ಮಿಕ ಆಚರಣೆಯಲ್ಲ. ಆದರೆ, ಬಾನು ಮುಷ್ತಾಕ್ ವಿರುದ್ಧ ಯಾವುದೇ ಫತ್ವ ಹೊರಡಿಸಲಾಗಿಲ್ಲ. ಧರ್ಮಗುರುಗಳೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ” ಎಂದು ವಿವರಿಸಿದರು.