ಕಾರ್ಕಳದ ಶಗುನ್ ಚೀನಾದಲ್ಲಿ ನಡೆಯಲಿರುವ ವಾಲಿಬಾಲ್‌ ಪಂದ್ಯಾಟಕ್ಕೆ ಆಯ್ಕೆ

ಕಾರ್ಕಳ: ಚೀನಾದ ಶಾಂಗ್ಲೋದಲ್ಲಿ ಡಿಸೆಂಬರ್ 4ರಿಂದ 13ರವರೆಗೆ ನಡೆಯಲಿರುವ 15 ವರ್ಷ ಒಳಗಿನ ವಿಶ್ವ ಶಾಲಾ ಮಕ್ಕಳ ವಾಲಿಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ತಂಡಕ್ಕೆ ಕಾರ್ಕಳದ ಪ್ರತಿಭಾವಂತ ಕ್ರೀಡಾಪಟು ಶಗುನ್ ಎಸ್. ವರ್ಮ ಹೆಗ್ಡೆ ಆಯ್ಕೆಯಾಗಿದ್ದಾರೆ.

ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ಆಶ್ರಯದಲ್ಲಿ ಪೂನೆಯಲ್ಲಿ ಆಗಸ್ಟ್ 29ರಿಂದ 30ರವರೆಗೆ ನಡೆದ ರಾಷ್ಟ್ರೀಯ ಆಯ್ಕೆ ಶಿಬಿರದಲ್ಲಿ ದೇಶದ ವಿವಿಧ ರಾಜ್ಯಗಳಿಂದ 200ಕ್ಕೂ ಹೆಚ್ಚು ಆಟಗಾರ್ತಿಯರು ತಮ್ಮ ಕೌಶಲ್ಯ ಪ್ರದರ್ಶಿಸಿದರು. ರಾಷ್ಟ್ರೀಯ ಆಯ್ಕೆಗಾರರ ಸಮ್ಮುಖದಲ್ಲಿ ನಡೆದ ಸ್ಪರ್ಧಾತ್ಮಕ ಶಿಬಿರದಲ್ಲಿ ಶಗುನ್ ಶ್ರೇಷ್ಠ ಪ್ರದರ್ಶನ ನೀಡಿ, ಅಂತಿಮವಾಗಿ ಘೋಷಿಸಲಾದ 23 ಮಂದಿಯ ಪೈಕಿ 2ನೇ ಸ್ಥಾನ ಪಡೆದುಕೊಂಡಿದ್ದಾರೆ. ಕರ್ನಾಟಕದಿಂದ ಆಯ್ಕೆಯಾದ ಏಕೈಕ ಆಟಗಾರ್ತಿಯಾಗಿರುವುದು ರಾಜ್ಯಕ್ಕೆ ಹೆಮ್ಮೆ ತಂದುಕೊಟ್ಟಿದೆ.

ಕಾರ್ಕಳ ಕ್ರೈಸ್ತಕಿಂಗ್ ಆಂಗ್ಲ ಮಾದ್ಯಮ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ಶಗುನ್, ಶೃತಿ ಮತ್ತು ಸಂದೇಶ್ ವರ್ಮ ದಂಪತಿಗಳ ಪುತ್ರಿ. ಜೋಡುರಸ್ತೆ ಕೊರಚೊಟ್ಟು ಕ್ರೀಡಾಂಗಣದಲ್ಲಿ ಸಂತೋಷ್ ಡಿ’ಸೋಜಾ, ಜೀವನ್ ಡಿ’ಸಿಲ್ವಾ ಮತ್ತು ಜೈರಾಜ್ ಪೂಜಾರಿ ಇವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದು ತಮ್ಮ ಪ್ರತಿಭೆಯನ್ನು ತೋರಿದ್ದಾರೆ.

ಈ ಸಾಧನೆಯ ಮೂಲಕ ಶಗುನ್ ತಮ್ಮ ಹಠಮಾರಿ ಪರಿಶ್ರಮ ಮತ್ತು ತಾಳ್ಮೆಯೊಂದಿಗೆ ಕಾರ್ಕಳಕ್ಕೆ ಮಾತ್ರವಲ್ಲ, ಕರ್ನಾಟಕಕ್ಕೂ ಕೀರ್ತಿಯನ್ನು ತಂದುಕೊಟ್ಟಿದ್ದಾರೆ. ಮುಂಬರುವ ಜಾಗತಿಕ ಮಟ್ಟದ ಸ್ಪರ್ಧೆಯಲ್ಲಿ ಅವರು ಭಾರತಕ್ಕೆ ಪದಕ ತಂದುಕೊಡಲಿದ್ದಾರೆಂಬ ನಿರೀಕ್ಷೆ ವ್ಯಕ್ತವಾಗಿದೆ.

error: Content is protected !!