ಐಜ್ವಾಲ್: ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ 13ರಂದು ಮಿಜೋರಾಂಗೆ ಭೇಟಿ ನೀಡಿ ಹೊಸ ಬೈರಾಬಿ–ಸೈರಾಂಗ್ ರೈಲು ಮಾರ್ಗವನ್ನು ಉದ್ಘಾಟಿಸುವ ನಿರೀಕ್ಷೆ ಇದೆ. ನಂತರ ಅವರು ಜನಾಂಗೀಯ ಹಿಂಸಾಚಾರದಿಂದ ತತ್ತರಿಸಿರುವ ಮಣಿಪುರಕ್ಕೂ ತೆರಳುವ ಸಾಧ್ಯತೆಯಿದೆ. ಮೇ 2023ರಲ್ಲಿ ಮಣಿಪುರದಲ್ಲಿ ಹಿಂಸಾಚಾರ ಆರಂಭವಾದ ನಂತರ ಇದು ಅವರ ಮೊದಲ ಭೇಟಿಯಾಗಲಿದೆ.
ಮಣಿಪುರದಲ್ಲಿ ಪ್ರಧಾನಿಯ ಆಗಮನವನ್ನು ಅಧಿಕೃತವಾಗಿ ದೃಢಪಡಿಸದಿದ್ದರೂ, ಮುಖ್ಯ ಕಾರ್ಯದರ್ಶಿ ಪುನೀತ್ ಕುಮಾರ್ ಗೋಯೆಲ್ ಅವರು ಸುರಕ್ಷತಾ ವ್ಯವಸ್ಥೆ ಹಾಗೂ ಸಿದ್ಧತೆಗಳನ್ನು ಪರಿಶೀಲಿಸಲು ಸಭೆ ನಡೆಸಿದ್ದಾರೆ. ಇಂಫಾಲ್‌ನ ಕಾಂಗ್ಲಾ ಹಾಗೂ ಚುರಾಚಂದ್‌ಪುರದ ಶಾಂತಿ ಮೈದಾನದಲ್ಲಿ “ನೀಲಿ ಪುಸ್ತಕದ ಪ್ರಕಾರ ಭದ್ರತಾ ವ್ಯವಸ್ಥೆ” ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.
ಮಿಜೋರಾಂನಲ್ಲಿ ಪ್ರಧಾನಿ ಭೇಟಿಗೆ ಸಿದ್ಧತೆ ತೀವ್ರಗೊಂಡಿದ್ದು, ಸರ್ಕಾರಿ ನೌಕರರು, ರೈತರು ಹಾಗೂ ವಿದ್ಯಾರ್ಥಿಗಳ ಭಾಗವಹಿಸುವಿಕೆ ಕುರಿತು ಚರ್ಚೆ ನಡೆದಿದೆ. 51.38 ಕಿಮೀ ಉದ್ದದ ರೈಲು ಮಾರ್ಗವು ಆಕ್ಟ್ ಈಸ್ಟ್ ನೀತಿ ಅಡಿಯಲ್ಲಿ ಈಶಾನ್ಯ ಭಾರತದ ಸಂಪರ್ಕ ಹಾಗೂ ಆರ್ಥಿಕ ಏಕೀಕರಣಕ್ಕೆ ಬಲ ನೀಡಲಿದೆ.
ಮೇ 2023ರಿಂದ ಮಣಿಪುರದಲ್ಲಿ ಮೈಟೈ–ಕುಕಿ ಸಮುದಾಯಗಳ ನಡುವೆ ನಡೆದ ಹಿಂಸಾಚಾರದಲ್ಲಿ 260ಕ್ಕೂ ಹೆಚ್ಚು ಜನರು ಸಾವನ್ನಪ್ಪಿ, ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ.