
ಮಂಗಳೂರು: ಫಳ್ನೀರ್ ಆಸ್ಪತ್ರೆಗೆ ಸಮೀಪ ಭಾನುವಾರ ರಾತ್ರಿ ಸುಮಾರು 9.15ರ ಸುಮಾರಿಗೆ ತನ್ನ ಮೇಲೆ ಅಪರಿಚಿತ ವ್ಯಕ್ತಿ ಹಲ್ಲೆ ನಡೆಸಿದ್ದಾಗಿ ಆಟೋ ಚಾಲಕನೋರ್ವ ಹೇಳಿಕೊಂಡ ಪ್ರಕರಣ ಸುಳ್ಳು ಎನ್ನುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ. ಮಂಗಳೂರು ಪೊಲೀಸ್ ಕಮೀಷನರ್ ಸುಧೀರ್ ರೆಡ್ಡಿ ಅವರು ಪ್ರಕರಣದ ಸತ್ಯಾಸತ್ಯತೆಯ ಬಗ್ಗೆ ಮಾಹಿತಿ ನೀಡಿದ್ದಾರೆ.
ಹಿನ್ನೆಲೆ: ಭಾನುವಾರ ರಾತ್ರಿ ಆಟೋ ಚಾಲಕ ಬಶೀರ್ ಎನ್ನುವಾತ, ತನ್ನ ಮೇಲೆ ಅಪರಿಚಿತ ವ್ಯಕ್ತಿಯೋರ್ವ ಬ್ಯಾರೀ ಭಾಷೆಯಲ್ಲಿ ಮಾತನಾಡಿ, “ನೀನು ಪೊಲೀಸರಿಗೆ ಮಾಹಿತಿ ನೀಡುತ್ತಿದ್ದೀಯ?” ಎಂದು ಪ್ರಶ್ನಿಸಿ ಚುಚ್ಚಿ ಗಾಯ ಮಾಡಿದ್ದಾನೆ, ತಾನು ಆತನಿಗೆ ತಿರುಗೇಟು ನೀಡಿದಾಗ ಆತ ಪರಾರಿಯಾಗಿದ್ದಾಗಿ ಹೇಳಿದ್ದ. ಅಲ್ಲದೆ ಅವನ ದೇಹದ ಮೇಲೆ ಸಣ್ಣದೊಂದು ಚುಚ್ಚಿದ ಗಾಯವೂ ಇತ್ತು. ಪೊಲೀಸರು ಧಾವಿಸಿ ಈತನ ಹೇಳಿಕೆ ಪಡೆದು ತನಿಖೆ ನಡೆಸಿದ್ದರು.
ಅಸಲಿಗೆ ಈ ಪ್ರಹಸನವೇ ಸುಳ್ಳೆನ್ನುವುದನ್ನು ಪೊಲೀಸರು ತನಿಖೆಯಿಂದ ಬಹಿರಂಗಪಡಿಸಿದ್ದಾರೆ. ಆರೋಪಿ ಸ್ವತಃ ತನ್ನ ದೇಹದ ಮೇಲೆ ಗಾಯ ಮಾಡಿಕೊಂಡು ಸಮುದಾಯವನ್ನು ದೂಷಿಸಲು ಈ ರೀತಿ ಸುಳ್ಳು ಘಟನೆಯನ್ನು ಸೃಷ್ಟಿಸಿದ್ದಾನೆ ಎನ್ನುವುದು ಬಯಲಾಗಿದೆ.
ಅಲ್ಲದೆ ಘಟನೆ ನಡೆದ ದಿನ ಚಾಲಕನಾಗಲೀ ಆತನ ರಿಕ್ಷಾವಾಗಲೀ ಆ ಸ್ಥಳದಲ್ಲೇ ಇರಲಿಲ್ಲ ಎನ್ನುವ ಸುಳಿವು ಹಾಗೂ ಇತರ ಪೂರಕ ಪುರಾವೆಗಳೂ ಸಗ ಪೊಲೀಸರಿಗೆ ಲಭಿಸಿತ್ತು. ಸಂಶಯಗೊಂಡ ಪೊಲೀಸರು ಇದರ ಆಧಾರದಲ್ಲಿ ಆತನ ತೀವ್ರ ತನಿಖೆ ನಡೆಸಿದಾಗ ಸ್ವತಃ ತಾನೇ ಘಟನೆಯನ್ನು ಸೃಷ್ಟಿಸಿದ್ದು, ತನಗೆ ತಾನೇ ಗಾಯ ಮಾಡಿಕೊಂಡಿದ್ದಾಗಿ ಆತ ಬಹಿರಂಗಪಡಿಸಿ, ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ಕಮೀಷನರ್ ತಿಳಿಸಿದ್ದಾರೆ.
ಒಂದು ವೇಳೆ ಆರೋಪಿ ದಾಳಿಕೋರರು ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿದವರು ಎಂದು ಹೇಳಿದ್ದರೆ, ಜಿಲ್ಲೆಯ ಶಾಂತಿ ಕದಡುವ ಆತಂಕ ವ್ಯಕ್ತವಾಗಿತ್ತು. ಅಲ್ಲದೆ ಸುಳ್ಳು ದೂರು ನೀಡಿದ ಆರೋಪಿಯ ವಿರುದ್ಧ ಕಟ್ಟುನಿಟ್ಟಾದ ಕಾನೂನು ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಕಮೀಷನರ್ ಹೇಳಿದ್ದೇನು?
“ಸುಳ್ಳು ಸುದ್ದಿ ಭಾರೀ ವೇಗದಲ್ಲಿ ಓಡುತ್ತದೆ, ಆದರೆ ಸತ್ಯ ಕುಂಟುತ್ತಾ ಬಂದು ಎದುರು ನಿಲ್ಲುತ್ತದೆ. ಈ ವಿಚಾರದಲ್ಲೂ ಅದೇ ರೀತಿ ಆಗಿದೆ. ಆಟೋ ಚಾಲಕನಿಗೆ ಹಲ್ಲೆ ಎಂಬ ಸುದ್ದಿ ಭಾರೀ ವೇಗದಲ್ಲಿ ಓಡಿತು, ಒಂದು ವೇಳೆ, ‘ಹಿಂದುಗಳು ಹಲ್ಲೆ ಮಾಡಿದ್ದಾರೆ’ ಎಂದು ಆತ ಹೇಳಿರುತ್ತಿದ್ದರೆ, ಪರಿಸ್ಥಿತಿ ಬೇರೆಯೇ ಆಗುತ್ತಿತ್ತು. ಜಾಲತಾಣದಲ್ಲಿ ವಿಭಿನ್ನ ರೀತಿಯಲ್ಲಿ ಸುದ್ದಿ ಓಡುತ್ತಿತ್ತು. ಪೊಲೀಸರ ಕಠಿಣ ವಿಚಾರಣೆಯ ನಂತರ ಹಲ್ಲೆಯೇ ಆಗಿಲ್ಲ ಎನ್ನುವ ನೈಜ ವಿಷಯ ಗೊತ್ತಾಗಿದೆ. ಸುದ್ದಿ ಹಂಚಿಕೊಳ್ಳುವಾಗ ಸಾರ್ವಜನಿಕರು ಜಾಗ್ರತೆ ವಹಿಸಬೇಕು ಎಂದು ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.