ನವದೆಹಲಿ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಸುಂಕಾಸ್ತ್ರ ಪ್ರಯೋಗಿಸಿದ ಬೆನ್ನಲ್ಲೇ ಸಂಬಂಧ ಹಳಸಿದೆ. ಚೀನಾಗೂ ಅಮೆರಿಕಾವನ್ನು ಕಂಡರಾಗದು. ಟ್ರಂಪ್ ಹುಚ್ಚನ ಹಾಗೆ ನಡೆದುಕೊಂಡು ಭಾರತದೊಂದಿಗೆ ಅಂತರ ಕಾಯುತ್ತಿರುವ ಬೆನ್ನಲ್ಲೇ ಶತ್ರುವಿನ ಶತ್ರು ಮಿತ್ರ ಎಂಬಂತೆ ಭಾರತ ಚೀನಾ ಹತ್ತಿರ ವಾಗಲಾರಂಭಿಸಿದೆ. ಅತ್ತ ಚೀನಾದ ವಿರುದ್ಧ ಅಮೆರಿಕಾ ವ್ಯಾಪಾರ ಯುದ್ಧ ತೀವ್ರಗೊಳಿಸಿದ ನಂತರ, ಬೀಜಿಂಗ್ ದೆಹಲಿಯತ್ತ ತಿರುಗಿ ನೋಡುವ ಪ್ರಯತ್ನ ಆರಂಭಿಸಿದೆ ಎಂದು ಬ್ಲೂಮ್ಬರ್ಗ್ ವರದಿ ಹೇಳಿದೆ.
ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಖಾಸಗಿ ಪತ್ರ ಬರೆದಿದ್ದು, ಅದರ ಸಂದೇಶವನ್ನು ಶೀಘ್ರವೇ ಪ್ರಧಾನಿ ನರೇಂದ್ರ ಮೋದಿಗೆ ತಲುಪಿಸಲಾಗಿದೆ. ಆ ಪತ್ರದಲ್ಲಿ, ಭಾರತ-ಅಮೆರಿಕಾ ಒಪ್ಪಂದಗಳು ಚೀನಾದ ಹಿತಕ್ಕೆ ಧಕ್ಕೆ ತರಬಾರದು ಎಂಬ ಆತಂಕವನ್ನು ಕ್ಸಿ ವ್ಯಕ್ತಪಡಿಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ. ಜೊತೆಗೆ, ಚೀನಾ ತನ್ನ ಮುಂದಿನ ತಂತ್ರವನ್ನು ಸಮನ್ವಯಗೊಳಿಸಲು ಒಬ್ಬ ಪ್ರಾಂತ್ಯದ ಅಧಿಕಾರಿಯನ್ನು ನೇಮಿಸಿರುವುದನ್ನೂ ತಿಳಿಸಿದೆ.
ಟ್ರಂಪ್ ಸುಂಕ ನೀತಿಯ ಹೊಡೆತಕ್ಕೆ ಗುರಿಯಾದ ಭಾರತ ಮತ್ತು ಚೀನಾ, ದೀರ್ಘಕಾಲಗಳಿಂದ ಇದ್ದ ಗಡಿ ವಿವಾದ ಪರಿಹಾರ ಕುರಿತು ಮಾತುಕತೆ ಪುನರಾರಂಭಿಸಲು ಒಪ್ಪಿಕೊಂಡಿವೆ. ಇದರ ಹಿನ್ನೆಲೆಯಲ್ಲಿ ದ್ವಿಪಕ್ಷೀಯ ಸಂಬಂಧಗಳಲ್ಲಿ ಗಮನಾರ್ಹ ಸುಧಾರಣೆ ಉಂಟಾಗಿದೆ.
– ಶೀಘ್ರ ಭಾರತ-ಚೀನಾ ನೇರ ಪ್ರಯಾಣಿಕ ವಿಮಾನಗಳ ಪುನರಾರಂಭ
-ಯೂರಿಯಾ ಸಾಗಣೆಯ ಮೇಲಿನ ನಿರ್ಬಂಧ ಸಡಿಲಿಸಿದ ಬೀಜಿಂಗ್
-ಚೀನಾದ ಪ್ರವಾಸಿಗರಿಗೆ ಭಾರತದಿಂದ ಮತ್ತೆ ಪ್ರವಾಸಿ ವೀಸಾ
ಟ್ರಂಪ್ ಹೇರಿದ ಸುಂಕ ನೀತಿ ಬೀಜಿಂಗ್-ದೆಹಲಿ ಸಂಬಂಧ ಸುಧಾರಣೆಗೆ ಕಾರಣವಾಗಿರುವುದು ಅಮೆರಿಕಾಗೆ ದೊಡ್ಡ ಹೊಡೆತ ಎಂದು ವಿಶ್ಲೇಷಕರು ಪರಿಗಣಿಸಿದ್ದಾರೆ. ಮುಂದಿನ ವಾರ ಶಾಂಘೈ ಸಹಕಾರ ಸಂಘಟನೆಯ (SCO) ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಮತ್ತು ಕ್ಸಿ ಜಿನ್‌ಪಿಂಗ್ ಮುಖಾಮುಖಿ ಭೇಟಿಯಾಗುವ ನಿರೀಕ್ಷೆ ಇದೆ. ಏಳು ವರ್ಷಗಳ ಬಳಿಕ ಮೋದಿ ಚೀನಾ ಪ್ರವಾಸ ಕೈಗೊಳ್ಳುತ್ತಿರುವುದು ವಿಶೇಷ.
ಅಂತರರಾಷ್ಟ್ರೀಯ ತಜ್ಞರ ಪ್ರಕಾರ, ಈ ಭೇಟಿ ಅಮೆರಿಕಾ ಪ್ರಾಬಲ್ಯಕ್ಕೆ ಪರ್ಯಾಯವಾಗಿ ಹೊಸತೊಂದು ಜಾಗತಿಕಶಕ್ತಿ ಉದುಯವಾಗಗುತ್ತಿರುವ ಸಂಕೇತಾ ಎಂದಿದ್ದಾರೆ.