ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವ ರಾಜ್ಯ ಸರ್ಕಾರದ ನಿರ್ಧಾರ ಈಗ ರಾಜಕೀಯ ಬಿರುಗಾಳಿ ಎಬ್ಬಿಸಿದೆ. ಮೊದಲು ನಿರ್ಧಾರವನ್ನು ಸ್ವಾಗತಿಸಿದ್ದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಇದೀಗ ವಿರೋಧ ವ್ಯಕ್ತಪಡಿಸಿದ್ದಾರೆ.
🔴 “ನನ್ನ ಭಾವನೆಗಳಿಗೆ ಧಕ್ಕೆ”
ಸುತ್ತೂರು ಮಠದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಯದುವೀರ್, “ಬಾನು ಮುಷ್ತಾಕ್ ಅವರ ಹಿಂದಿನ ಹೇಳಿಕೆಗಳಲ್ಲಿ ಕನ್ನಡ ತಾಯಿ ಭುವನೇಶ್ವರಿ ಮತ್ತು ಹರಿಶಿನ ಕುಂಕುಮ ಬಾವುಟ ಅವಮಾನವಾಗಿದೆ. ಸ್ಪಷ್ಟನೆ ಕೊಡದಿದ್ದರೆ ಅಥವಾ ಹೇಳಿಕೆ ಹಿಂತೆಗೆದುಕೊಳ್ಳದಿದ್ದರೆ, ನಾನು ವಿರೋಧಿಸುತ್ತೇನೆ” ಎಂದು ಖಡಕ್ ಎಚ್ಚರಿಕೆ ನೀಡಿದರು.
🟡 “ಮೂರ್ತಿ ಪೂಜೆ ನಮ್ಮ ಶ್ರೇಷ್ಠತೆ”
“ಬಾನು ಮುಷ್ತಾಕ್ ಅವರ ಧಾರ್ಮಿಕ ಆಚರಣೆ ನನ್ನ ವಿಷಯವಲ್ಲ. ಆದರೆ ನಮ್ಮ ಧರ್ಮದಲ್ಲಿ ಮೂರ್ತಿ ಪೂಜೆ ಶ್ರೇಷ್ಠ. ಚಾಮುಂಡೇಶ್ವರಿ ತಾಯಿಯನ್ನು ಗೌರವಿಸುವುದು ನಮ್ಮ ಕರ್ತವ್ಯ. ಹೀಗಾಗಿ ಹೇಳಿಕೆ ಹಿಂತೆಗೆದುಕೊಳ್ಳದಿದ್ದರೆ ದಸರಾ ಉದ್ಘಾಟನೆಗೆ ವಿರೋಧ” ಎಂದು ಸ್ಪಷ್ಟಪಡಿಸಿದರು.
🔵 ಡಿಕೆಶಿ ಹೇಳಿಕೆಗೆ ತಿರುಗೇಟು
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಚಾಮುಂಡಿ ಬೆಟ್ಟ ಕುರಿತ ಹೇಳಿಕೆಗೆ ಕಟುವಾಗಿ ಪ್ರತಿಕ್ರಿಯಿಸಿದ ಸಂಸದರು,
“ಚಾಮುಂಡಿ ಬೆಟ್ಟ ಸದಾ ಹಿಂದೂ ಧಾರ್ಮಿಕ ಕೇಂದ್ರ. ಅದನ್ನು ಬೇರೆ ಶ್ರದ್ಧಾ ಕೇಂದ್ರವೆಂದು ಹೇಳುವುದು ಹಾಸ್ಯಾಸ್ಪದ. ಯಾರಿಗೆ ಮೆಚ್ಚಿಸಲು ಇಂಥ ಮಾತು?” ಎಂದು ಪ್ರಶ್ನಿಸಿದರು..
🟢 ರಾಜಕೀಯ ಕುತೂಹಲ ಹೆಚ್ಚಿಸಿದ ವಿವಾದ
ಈ ಹೇಳಿಕೆಗಳಿಂದ ಮೈಸೂರು ದಸರಾ ಉದ್ಘಾಟನೆಯ ಸುತ್ತಲಿನ ರಾಜಕೀಯ ಚರ್ಚೆ ಗರಿಷ್ಠ ಮಟ್ಟಕ್ಕೇರುತ್ತಿದ್ದು, ಬಾನು ಮುಷ್ತಾಕ್ ತಮ್ಮ ನಿಲುವು ಸ್ಪಷ್ಟಪಡಿಸುತ್ತಾರೆಯೇ ಎಂಬ ಕುತೂಹಲ ಎಲ್ಲೆಡೆ ತಾರಕಕ್ಕೇರಿದೆ
ಬಾನು ಮುಸ್ತಾಕ್ ಮೂರ್ತಿ ಪೂಜೆ ಬಗ್ಗೆ ಹೇಳಿದ್ದೇನು?
ಬಾನು ಮುಸ್ತಾಕ್ 2023 ರ ಸಾಹಿತ್ಯ ಸಮ್ಮೇಳನವೊಂದರಲ್ಲಿ ಆಡಿದ್ದ ಮಾತುಗಳು ವಿವಾದಕ್ಕೆ ಕಾರಣವಾಗಿತ್ತು. ಆಗ ಅವರು ನೀವು ಕನ್ನಡವನ್ನು ʻಭುವನೇಶ್ವರಿʼ ಎಂದು ಪೂಜಿಸುತ್ತಿರುವುದು ಸರಿಯಲ್ಲ. ಹಳದಿ-ಕೆಂಪು, ಅರಶಿನ ಕುಂಕುಮ ಭಾವದಿಂದ ಪೂಜಿಸುತ್ತಿರುವುದು, ಕನ್ನಡ ಮಣ್ಣನ್ನು ದೇವೀಯ ರೂಪದಲ್ಲಿ ಪೂಜಿಸುವುದು ಅಲ್ಪಸಂಖ್ಯಾತರು ಸೇರಿದಂತೆ ಕೆಲರ ಭಾವನೆಗಳಿಗೆ ವಂಚನೆ ಎಂಬರ್ಥದಲ್ಲಿ ಹೇಳಿಕೆ ನೀಡಿದ್ದರು. ಇದು ಅವರ ಮೂರ್ತಿ ಪೂಜೆ ಕುರಿತು ನೇರ ಟೀಕೆ ಆಗಿರಲಿಲ್ಲ. ಆದರೆ, ಮೂರ್ತಿ ಅಥವಾ ಮೂರ್ತಿಮಾನ್ಯತೆಯನ್ನು ಒಪ್ಪಿಕೊಳ್ಳುವ ಬಗ್ಗೆ ಅವರ ಅಭಿಪ್ರಾಯವಾಗಿ ಈ ವಿಚಾರ ಹೆಚ್ಚು ಚರ್ಚೆಗೆ ಕಾರಣವಾಯಿತು.