ಮೂಡುಬಿದಿರೆ: ಸುಮಾರು ಮೂರು ಲಕ್ಷ ರೂಪಾಯಿ ಮೌಲ್ಯದ ಚಿನ್ನ ಹಾಗೂ ಎರಡು ಲಕ್ಷ ರೂಪಾಯಿ ನಗದು ಹಿಂತಿರುಗಿಸದೇ ಆಟೋ ಚಾಲಕನೊಬ್ಬ ಉಡಾಫೆ ಮಾತು ಆಡಿದ ಪರಿಣಾಮ ಬೇಸತ್ತ ತೋಡಾರು ಗ್ರಾಮದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ಬೆಳಕಿಗೆ ಬಂದಿದೆ.
ಆತ್ಮಹತ್ಯೆ ಮಾಡಿಕೊಂಡವರು ತೋಡಾರು ಏರ್ ಇಂಡಿಯಾ ಅಪಾರ್ಟ್ಮೆಂಟ್‌ನಲ್ಲಿ ವಾಸವಿದ್ದ ಶಫ್ರೀನಾ ಬಾನು (31). ಆರೋಪಿಯಾಗಿರುವುದು ಪುತ್ತಿಗೆ ಗ್ರಾಮದ ನಿವಾಸಿ ಅಶ್ರಫ್.
ಮೃತರು ಪತಿ ನವಾಝ್ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಿದ್ದರು. ಏಳು ತಿಂಗಳ ಹಿಂದೆ ಅಶ್ರಫ್ ಶಫ್ರೀನಾ ಬಾನುರವರಿಂದ ರೂ.2 ಲಕ್ಷ ನಗದು ಹಾಗೂ ರೂ.3 ಲಕ್ಷ ಮೌಲ್ಯದ ಬಂಗಾರ ಪಡೆದುಕೊಂಡಿದ್ದ. ಹಣ ಹಾಗೂ ಆಭರಣವನ್ನು ಹಿಂದಿರುಗಿಸಲು ಒತ್ತಾಯಿಸಿದಾಗ ಪ್ರತೀ ಬಾರಿ ತಪ್ಪಿಸಿಕೊಂಡಿದ್ದಾನೆ.
ಇತ್ತೀಚೆಗೆ ಶಫ್ರೀನಾ ಬಾನುರವರಿಗೆ ಕರೆಮಾಡಿ, “ಹಣ-ಚಿನ್ನ ಕೊಟ್ಟಿದ್ದಕ್ಕೆ ಏನು ಪುರಾವೆ ಇದೆ?” ಎಂದು ಉಡಾಫೆಯಾಗಿ ಮಾತನಾಡಿದ್ದಾನೆಂದು ತಿಳಿದುಬಂದಿದೆ.
ಇದರಿಂದ ಮನನೊಂದು ಶಫ್ರೀನಾ ಬಾನು ತಮ್ಮ ಮನೆಯಲ್ಲಿ ಫ್ಯಾನಿಗೆ ನೈಲಾನ್ ಬಟ್ಟೆ ಕಟ್ಟಿ ನೇಣು ಬಿಗಿದುಕೊಂಡಿದ್ದಾರೆ.
ಈ ಕುರಿತು ಮೃತೆಯ ಪತಿ ನವಾಝ್ ಮೂಡುಬಿದಿರೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.