ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹಗಳನ್ನು ಹೂತು ಹಾಕಿರುವ ಆರೋಪದ ತನಿಖೆ ನಡೆಸುತ್ತಿರುವ ಎಸ್.ಐ.ಟಿ ಕಚೇರಿಗೆ ಗುರುವಾರ ಮೃತ ಸೌಜನ್ಯಳ ತಾಯಿ ಕುಸುಮಾವತಿ ಆಗಮಿಸಿ ದೂರು ಸಲ್ಲಿಸಿದ್ದಾರೆ.
ಕುಸುಮಾವತಿ ಹಾಗೂ ಮನೆಯವರು ಮಧ್ಯಾಹ್ನ ಕಚೇರಿಗೆ ಆಗಮಿಸಿದಾಗ, ಅಧಿಕಾರಿಗಳ ಸೂಚನೆಯ ಮೇರೆಗೆ ಆರಂಭದಲ್ಲಿ ಅಲ್ಲಿಂದ ಹಿಂತಿರುಗಿದ್ದರು. ಬಳಿಕ ಅಧಿಕೃತ ಸೂಚನೆಯಂತೆ ಮತ್ತೆ ಎಸ್.ಐ.ಟಿ ಕಚೇರಿಗೆ ಹಾಜರಾಗಿ ದೂರು ಸಲ್ಲಿಸಿದರು.
ಮಾಸ್ಕ್ ಮ್ಯಾನ್ ಚೆನ್ನಯ್ಯ ಯೂಟ್ಯೂಬರ್‌ಗಳಿಗೆ ನೀಡಿದ ಸಂದರ್ಶನದಲ್ಲಿ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಸ್ಫೋಟಕ ಹೇಳಿಕೆಗಳನ್ನು ನೀಡಿದ್ದ ಹಿನ್ನೆಲೆಯಲ್ಲಿ, ಈ ಕುರಿತು ತನಿಖೆ ನಡೆಸುವಂತೆ ದೂರು ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚೆಗೆ ಯೂಟ್ಯೂಬ್ ಚಾನೆಲ್‌ಗೊಂದು ನೀಡಿದ ಸಂದರ್ಶನದಲ್ಲಿ ಚಿನ್ನಯ್ಯ, ʻಸೌಜನ್ಯ ಶವವನ್ನು ತೆಗೆದುಕೊಂಡು ಹೋಗುವುದನ್ನು ನಾನು ನೋಡಿದ್ದೇನೆʼ ಎಂದು ಹೇಳಿಕೆ ನೀಡಿದ್ದ. ಈ ಹೇಳಿಕೆಯನ್ನು ಆಧಾರವನ್ನಾಗಿಸಿಕೊಂಡು, ಸೌಜನ್ಯ ತಾಯಿ ತಮ್ಮ ಮಗಳ ಕೊಲೆ ಪ್ರಕರಣದಲ್ಲಿ ಚಿನ್ನಯ್ಯನನ್ನು ಸಾಕ್ಷಿಯಾಗಿ ಪರಿಗಣಿಸುವ ಮನೋಭಾವ ಹೊಂದಿದ್ದಾರೆ.
ದೂರು ಸ್ವೀಕರಿಸಿದ ಎಸ್.ಐ.ಟಿ ಅಧಿಕಾರಿಗಳು, “ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿ, ಹಿಂಬರಹ ಬರೆದು ಕಳಿಸಿದ್ದಾರೆ.