ಐದು ವರ್ಷಗಳಿಂದ ದ.ಕ. ಜಿಲ್ಲೆಯಲ್ಲಿ ವಸತಿ ಇಲಾಖೆಯ ಮನೆ ನಿರ್ಮಾಣ ಕಾರ್ಯ ಕುಂಠಿತ: ಐವನ್

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಲ್ಲಿ ವಸತಿ ಇಲಾಖೆಯ ಮನೆ ನಿರ್ಮಾಣ ಕಾರ್ಯ ಪ್ರಗತಿ ಕುಂಠಿತವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಆರೋಪಿಸಿದ್ದಾರೆ.

ನಗರದ ಮಹಾನಗರ ಪಾಲಿಕೆ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು, “ಮನೆ ನಿರ್ಮಾಣದಲ್ಲಿ ಇರುವ ತಾಂತ್ರಿಕ ತೊಡಕುಗಳನ್ನು ನಿವಾರಿಸಲು ವಸತಿ ಸಚಿವರು ಮಂಗಳೂರಿಗೆ ಆಗಮಿಸಿ ಇಲಾಖಾ ಪ್ರಗತಿ ಪರಿಶೀಲನೆ ಸಭೆ ನಡೆಸಬೇಕು. ಅಲ್ಲದೆ ಸರಕಾರವು ಈ ಕುರಿತು ಶ್ವೇತಪತ್ರ ಹೊರಡಿಸಬೇಕು” ಎಂದು ಆಗ್ರಹಿಸಿದರು.

ಅವರು ಮುಂದುವರಿದು, “ಫಲಾನುಭವಿಗಳಿಗೆ ಬ್ಯಾಂಕ್‌ಗಳು ಸಾಲ ನೀಡುತ್ತಿಲ್ಲ. ಮತ್ತೊಂದೆಡೆ, ಫಲಾನುಭವಿಗಳು ತಮ್ಮ ಪಾಲಿನ ಮೊತ್ತ ಪಾವತಿ ಮಾಡುತ್ತಿಲ್ಲ. ಈ ಕಗ್ಗಂಟಿನಿಂದ ವಸತಿ ಯೋಜನೆ ಅಡಚಣೆಯಾಗಿದೆ. ಬಾಡಿಗೆ ಮನೆಯಲ್ಲಿ ವಾಸಿಸುವವರಿಗೆ ಮಾಲಿಕರು ಒಪ್ಪಂದ ಪತ್ರ ನೀಡದೆ ತೊಂದರೆ ಉಂಟುಮಾಡುತ್ತಿದ್ದಾರೆ. ಇದರ ಪರಿಣಾಮವಾಗಿ ಮನೆ ಹಕ್ಕುಪತ್ರ ಸಿಕ್ಕಿಲ್ಲ” ಎಂದು ಹೇಳಿದರು.

ಕರಾವಳಿ ಪ್ರವಾಸೋದ್ಯಮ ಕುರಿತು ಮಾತನಾಡಿದ ಅವರು, “ಕರಾವಳಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ತರಲು ಸರಕಾರ ಭರವಸೆ ನೀಡಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಂಗಳೂರಲ್ಲಿ ಶೀಘ್ರದಲ್ಲೇ ಪ್ರವಾಸೋದ್ಯಮ ಅಭಿವೃದ್ಧಿ ಸಭೆ ನಡೆಸಲಿದ್ದಾರೆ. ನವೆಂಬರ್‌ನಲ್ಲಿ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಯುವ ಸಾಧ್ಯತೆಯೂ ಇದೆ” ಎಂದು ತಿಳಿಸಿದರು.

ನಗರದ ಭದ್ರತಾ ವ್ಯವಸ್ಥೆ ಬಲಪಡಿಸಲು ಅವರು ಒತ್ತಾಯಿಸಿ, “ಮಂಗಳೂರಿನ ಇಡೀ ನಗರ ಪ್ರದೇಶದಲ್ಲಿ ಎಐ ಕ್ಯಾಮೆರಾಗಳನ್ನು ಅಳವಡಿಸಲು ಮಹಾನಗರ ಪಾಲಿಕೆ ಹಾಗೂ ಸಂಚಾರಿ ಪೊಲೀಸರು ಕ್ರಮ ಕೈಗೊಳ್ಳಬೇಕು. ಇದರಿಂದ ಅಪರಾಧ ನಿಯಂತ್ರಣ ಹಾಗೂ ಸಂಚಾರ ದಟ್ಟಣೆ ನಿವಾರಣೆ ಸಾಧ್ಯ” ಎಂದರು.

ಈ ಸಂದರ್ಭದಲ್ಲಿ ವಿವಿಧ ಫಲಾನುಭವಿಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 5.19 ಲಕ್ಷ ರೂ. ಮೊತ್ತದ ಚೆಕ್‌ಗಳನ್ನು ಐವನ್ ಡಿಸೋಜಾ ವಿತರಿಸಿದರು.

ಸಭೆಯಲ್ಲಿ ಮುಖಂಡರಾದ ಶಶಿಧರ ಹೆಗ್ಡೆ, ನವೀನ್ ಡಿಸೋಜಾ, ಭಾಸ್ಕರ್, ಪ್ರೇಮ್ ಬಲ್ಲಾಳ್‌ಬಾಗ್, ಮೀನಾ ಟೆಲ್ಲಿಸ್ ಮತ್ತಿತರರು ಉಪಸ್ಥಿತರಿದ್ದರು.

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

ಕಾರ್ ಖರೀದಿಯ ನಿಮ್ಮ ಕನಸು ನನಸಾಗಬೇಕೇ? ಇಲ್ಲಿದೆ ಒಂದು ಸುವರ್ಣಾವಕಾಶ! ಹೆಚ್ಚಿನ ಮಾಹಿತಿಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ🔰

error: Content is protected !!